ಬೆಂಗಳೂರು: ಇದು ನನ್ನ ಕೊನೆಯ ಭಾಷಣ. ಮುಂದಿನ ಅಧಿವೇಶನದಲ್ಲಿ ನಾನು ಸದನಕ್ಕೆ ಬರಲ್ಲ. ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಅಂತಾ ಈಗಾಗಲೇ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಗದ್ಗದಿತರಾದರು.
ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎಲ್ಲಾ ಅವಕಾಶ ನೀಡಿದ್ದಾರೆ. ನಾನು ಅವರಿಗೆ ಚಿರರುಣಿ. ನನ್ನದು ಕೊನೆಯ ಸಭೆ ಎಂದು ತಿಳಿಸಿದರು. ಈ ವೇಳೆ ಪಕ್ಷಾತೀತವಾಗಿ, “ಇಲ್ಲ ನೀವು ಮತ್ತೆ ಆರಿಸಿ ಬರಬೇಕು” ಎಂದು ಸದನದಲ್ಲಿ ಶಾಸಕರು ಕೂಗಿದರು. ನಿಮ್ಮ ಸಲಹೆ ನಮ್ಮ ಸದನಕ್ಕೆ ಅವಶ್ಯಕತೆ ಇದೆ. ಮತ್ತೆ ನೀವು ಸದನಕ್ಕೆ ಬನ್ನಿ ಅಂತಾ ಪಕ್ಷಾತೀತವಾಗಿ ಶಾಸಕರು ಮನವಿ ಮಾಡಿದರು.
Advertisement
Advertisement
ಮಾತು ಮುಂದುವರಿಸಿದ ಯಡಿಯೂರಪ್ಪ ಅವರು, ವರಿಷ್ಠರು ನಮ್ಮನ್ನು ಎಂದೂ ಕಡೆಗಣಿಸಿಲ್ಲ. ಯಡಿಯೂರಪ್ಪಗೆ ಎಲ್ಲ ಗೌರವ, ಸ್ಥಾನಮಾನ ಕೊಟ್ಟರು ಮೋದಿಯವರು. ಪಕ್ಷ ಅವಕಾಶ ಕೊಟ್ಟಿದ್ದಕ್ಕೆ ನಾಲ್ಕು ಬಾರಿ ಸಿಎಂ ಆದೆ. ಪಕ್ಷ ನನಗ ಕೊಟ್ಟ ಅವಕಾಶವನ್ನು ಯಾರಿಗೂ ಕೊಟ್ಟಿಲ್ಲ. ಯಡಿಯೂರಪ್ಪ ಸುಮ್ಮನೆ ಕೂರಲ್ಲ. ನಾವು ಮತ್ತೆ ಅಧಿಕಾರಕ್ಕೆ ಬರೋದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ. ಕಾಂಗ್ರೆಸ್ ಮತ್ತೆ ವಿಪಕ್ಷ ಸ್ಥಾನದಲ್ಲೇ ಕೂರುತ್ತಾರೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುವುದನ್ನು ಆಕಡೆ ಕೂತಿರೋ ವಿಪಕ್ಷದವರು ನೋಡ್ತಾರೆ. ನಾವು ಮತ್ತೆ ಅಧಿಕಾರಕ್ಕೆ ಬರೋದು ನಿಶ್ಚಿತ. ನಮ್ಮ ಶಾಸಕರು ಕ್ಷೇತ್ರಗಳಿಗೆ ಹೋಗಿ ಜನರಿಗೆ ಸರ್ಕಾರದ ಸಾಧನೆಗಳ ಮನವರಿಕೆ ಮಾಡಬೇಕು. ಇದರಿಂದ ನೂರಕ್ಕೆ ನೂರು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸದನದಲ್ಲಿ ಭವಿಷ್ಯ ನುಡಿದರು.
Advertisement
ಬಜೆಟ್ ಕುರಿತು ಮಾತನಾಡಿದ ಬಿಎಸ್‌ವೈ, ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿಗಳು ಉತ್ತಮ ಬಜೆಟ್ ಮಂಡಿಸಿದ್ದಾರೆ. ರಾಜಕೀಯವಾಗಿ ಮಾತಾಡೋದಿಕ್ಕೆ ಯಾರಾದರೂ ಮಾತಾಡಬಹುದು. ನಾನೂ ಕೂಡ ಹಣಕಾಸು ಮಂತ್ರಿಯಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೋಢೀಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬೇಕಾಗುತ್ತದೆ. ಬಜೆಟ್ ವಿಶ್ಲೇಷಣೆ ವೇಳೆ ಇವೆಲ್ಲ ಗಮನಿಸಿ ಮಾತಾಡಬೇಕು. ಮುಖ್ಯಮಂತ್ರಿಗಳು ಒಳ್ಳೆಯ ಬಜೆಟ್ ಕೊಟ್ಟಿದಾರೆ ಅಂತ ಹೇಳಲು ಹೆಮ್ಮೆ ಪಡುತ್ತೇನೆ. ಕೋವಿಡ್‌ನಿಂದ ಆದ ಆರ್ಥಿಕ ಹಿಂಜರಿತ ಬಳಿಕ ಆರ್ಥಿಕ ಸ್ಥಿತಿ ಉತ್ತಮವಾಗಿ ಸುಧಾರಿಸಿದ್ದಾರೆ. ಸಂಪನ್ಮೂಲಗಳ ಕ್ರೋಢೀಕರಣ ಅನುಕರಣನೀಯ. ಸಂಪನ್ಮೂಲಗಳ ಕ್ರೋಢೀಕರಣದಲ್ಲಿ 17% ಬೆಳವಣಿಗೆ ಆಗಿದೆ. ಕೋವಿಡ್‌ನಿಂದಾದ ಆರ್ಥಿಕ ಹೊಡೆತ ಸರಿಯಾಗಲು ಮೂರ್ನಾಲ್ಕು ವರ್ಷ ಬೇಕೆಂದು ತಜ್ಞರು ಹೇಳಿದ್ದರು. ಆದರೆ ಬೊಮ್ಮಾಯಿಯವರು ಉಳಿತಾಯ ಬಜೆಟ್ ಕೊಟ್ಟಿದಾರೆ. ಸೋರಿಕೆ ತಡೆದಿದ್ದಾರೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಮಾತ್ರವಲ್ಲ, ರಾಷ್ಟ್ರೀಯ ಅಧ್ಯಕ್ಷಗೂ ರಾಜಕೀಯ ಜ್ಞಾನವಿಲ್ಲ: ಸಿದ್ದರಾಮಯ್ಯ
Advertisement
ಸಿದ್ದರಾಮಯ್ಯ ಈ ಒಳ್ಳೆಯ ಬಜೆಟ್ ಬಗ್ಗೆ ಕೆಲವಾದರೂ ಒಳ್ಳೆಯ ಮಾತಾಡಲಿಲ್ಲ. ಸಮತೋಲನ ಚಿಂತನೆಯಿಂದ ಬಜೆಟ್ ನೋಡಿ ವಾಸ್ತವಿಕ ಅಂಶದ ಬಗ್ಗೆ ಹೇಳ್ತಾರೆ ಅನ್ಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಹಾಗೆ ಹೇಳಲಿಲ್ಲ, ಇದು ನನಗೆ ನೋವು ತಂದಿದೆ. ಬಜೆಟ್‌ನಲ್ಲಿ ದೂರಗಾಮಿ ಆಲೋಚನೆ ಇದೆ. ಆರ್ಥಿಕ ಅಭಿವೃದ್ಧಿ, ಆರ್ಥಿಕ ಉತ್ತೇಜನಾ ಕ್ರಮಗಳಿವೆ. ನಮ್ಮ ರಾಜ್ಯ ಹೂಡಿಕೆದಾರರ ಮೆಚ್ಚಿನ ತಾಣವಾಗಲಿದೆ. ಮುಂದಿನ ವರ್ಷಗಳಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾಗಲಿದೆ. ಬೃಹತ್ ಯೋಜನೆಗಳನ್ನೂ ಬಜೆಟ್‌ನಲ್ಲಿ ಕೊಡಲಾಗಿದೆ. ಬೆಂಗಳೂರು ಇನ್ನೂ ಹೆಚ್ಚು ದೇಶ-ವಿದೇಶಗಳ ಗಮನ ಸೆಳೆಯಲು ಈ ಬಜೆಟ್ ಪೂರಕ. ರೈತರ ಆದಾಯ ದ್ವಿಗುಣ ಮಾಡಲು ಕಾರ್ಯಕ್ರಮ ಕೊಟ್ಟಿದ್ದಾರೆ. ಬಜೆಟ್‌ನಲ್ಲಿ ಎಲ್ಲ ವರ್ಗದ ಜನರನ್ನು ತಲುಪುವ ಕಾರ್ಯಕ್ರಮ ಕೊಟ್ಟಿದ್ದಾರೆ. ಬಜೆಟ್‌ಗೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರಾದೇಶಿಕ ಅಸಮಾನತೆ ನಿವಾರಣಾ ಪ್ರಯತ್ನಗಳಾಗಿವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾತುಗಳನ್ನು ಗಮನಿಸಿದ್ದೇನೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತಾಡಿದ್ದಾರೆ. ಮೋದಿಯವರು ಇದ್ದಿದ್ದಕ್ಕೇ ದೇಶ ಸದೃಢವಾಗಿದೆ. ಮೋದಿ ವಿಶ್ವಗುರು ಆಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶ ಸಮರ್ಥವಾಗಿ ಎದುರಿಸಿತು. ಮೋದಿಯವರ ಮಾರ್ಗದರ್ಶನದಡಿ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ಸಂಕೋಚ ಪಡುವ ಅಗತ್ಯ ಇಲ್ಲ. ಇದನ್ನು ನಮ್ಮ ವಿಪಕ್ಷ ನಾಯಕರು ಮಾಡಬೇಕಿತ್ತು. ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ. ನಮ್ಮ ಆಡಳಿತದಲ್ಲಿ ರಾಜ್ಯ ವಿಕಾಸ ಹೊಂದಿದೆ. ಇದರಲ್ಲಿ ಯಾರೂ ಅನುಮಾನ ಪಡುವ ಹಾಗಿಲ್ಲ. ಆರ್‌ಎಸ್‌ಎಸ್ ಚಿಂತನೆಗಳನ್ನು ವಿರೋಧಿಸಿದರೆ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ವಿಪಕ್ಷದವರು ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ಹಿಂಸಾತ್ಮಕ ರಾಜನೀತಿಯಿಂದಲೇ ಮಹಾತ್ಮ ಗಾಂಧಿ, ಇಂದಿರಾ, ರಾಜೀವ್ ಗಾಂಧಿ ಹತ್ಯೆಯಾಗಿದ್ದು: ಸುರ್ಜೆವಾಲಾ
ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮಾತನಾಡಿದ ಯಡಿಯೂರಪ್ಪ, ನೀವು ಗೆದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ನಿಲ್ಲಲ್ಲ ಅಂದ್ರೆ ಜನ ಹೇಗೆ ನಂಬ್ತಾರೆ? ನೀವು ಗೆದ್ದು ಬಂದ ಕ್ಷೇತ್ರದಲ್ಲೇ ನಿಲ್ಲಿ ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k