ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರ ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಆದರೆ ಬಿಜೆಪಿ ಪಕ್ಷಕ್ಕಾಗಿ ಹಾಗೂ ಸಚಿವೆಯಾಗಿ ಸುಷ್ಮಾ ಅವರು ತಮ್ಮ ದಿಟ್ಟ ನಡೆ, ನೇರ ನುಡಿ ಮೂಲಕವೇ ಎಲ್ಲರ ಮನಗೆದ್ದಿದ್ದಾರೆ.
ಹರಿಯಾಣ ಮೂಲದ ಸುಷ್ಮಾ ಸ್ವರಾಜ್ ಅವರು 1953 ಫೆಬ್ರವರಿ 14ರಂದು ಅಂಬಾಲಾ ಕಂಟೋನ್ಮೆಂಟ್‍ನಲ್ಲಿ ಜನಿಸಿದ್ದರು. ಹಾರ್ದೇವ್ ಶರ್ಮಾ ಹಾಗೂ ಲಕ್ಷ್ಮಿ ದೇವಿ ದಂಪತಿಗೆ ಜನಿಸಿದ ಸುಷ್ಮಾ ಅವರು ಸಂಸ್ಕೃತ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಆ ನಂತರ ಪಂಜಾಬ್ ವಿವಿಯಲ್ಲಿ ಕಾನೂನು ಪದವಿ ಪಡೆದು 1973ರಲ್ಲಿ ಸುಪ್ರೀಂಕೋರ್ಟ್ ವಕೀಲರಾಗಿ ಅಭ್ಯಾಸ ಆರಂಭಿಸಿದ ಇವರು, ಎಬಿವಿಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.
Advertisement
Advertisement
1975ರಲ್ಲಿ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದು, ಜಯಪ್ರಕಾಶ್ ನಾರಾಯಣರ ಕ್ರಾಂತಿಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ತುರ್ತು ಪರಿಸ್ಥಿತಿ ನಂತರ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಮಲದ ಕೈ ಹಿಡಿದಿದ್ದರು. 1977ರಂದು ಮೊದಲ ಬಾರಿಗೆ ಸುಷ್ಮಾ ಅವರು ಹರಿಯಾಣ ಶಾಸಕಿಯಾಗಿ ಆಯ್ಕೆಯಾದರು. ಅಂದಿನಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದರು.
Advertisement
1990 ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಗೊಂಡ ಸುಷ್ಮಾ 1996 ರಲ್ಲಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ದೆಹಲಿ ಸಿಎಂ ಆಗಿ, ಶಿಕ್ಷಣ ಸಚಿವೆಯಾಗಿ, ವಿದೇಶಾಂಗಸಚಿವೆಯಾಗಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದ ಸುಷ್ಮಾ ಬಿಜೆಪಿ ಹೈಕಮಾಂಡ್‍ನಂತೆ ಕೆಲಸ ನಿರ್ವಹಿಸಿ ಪಕ್ಷದ ಏಳ್ಗೆಗೆ ದುಡಿದಿದ್ದರು.
Advertisement
ಕರ್ನಾಟಕದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಸುಷ್ಮಾ ಅವರು ಬಳ್ಳಾರಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಕಂಡಿದ್ದರು.
1996ರಲ್ಲಿ 11ನೇ ಲೋಕಸಭೆ ಸದಸ್ಯೆಯಾದ(ಎರಡನೆಯ ಅವಧಿ) ಸುಷ್ಮಾ ಅವರು ಕೇಂದ್ರ ಮಾಹಿತಿ & ಪ್ರಸಾರ ಖಾತೆ ಸಚಿವೆಯಾಗಿ, 1998ರಲ್ಲಿ ಹಾಜ್ ಖಾಸ್ ಕ್ಷೇತ್ರದಿಂದ ದೆಹಲಿ ಅಸೆಂಬ್ಲಿಗೆ ಆಯ್ಕೆಯಾದ ಬಳಿಕ 1999ರಲ್ಲಿ ದೆಹಲಿ ಸಿಎಂ ಆಗಿ ಆಯ್ಕೆಯಾದರು. ನಂತರ 2002ರಿಂದ 2004ರವರೆಗೆ ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. 2009-14ರ 15ನೇ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾದ ಅವರು ಬಿಜೆಪಿ ಹಿರಿಯಾ ನಾಯಕ ಕೆ.ಎಲ್ ಅಡ್ವಾಣಿ ಅವರ ಬದಲಿಗೆ ಪ್ರತಿಪಕ್ಷ ನಾಯಕಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಬಳಿಕ 2014ರಲ್ಲಿ ಹಾಗೂ 2019ರಲ್ಲಿ ಮೋದಿ ಸರ್ಕಾರ ಬಂದ ಮೇಲೆ ಸತತ ಎರಡನೇ ಬಾರಿಗೆ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಕರ್ತವ್ಯ ನಿರ್ವಹಿಸಿ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಿದ್ದರು.
2003-04 ರವರೆಗೆ ಕುಟುಂಬ ಕಲ್ಯಾಣ ಸಚಿವೆಯಾಗಿದ್ದು, ಭೋಪಾಲ್, ಭುವನೇಶ್ವರ್, ಜೋಧಪುರ್, ಪಾಟ್ನಾ, ರಾಯಪುರ, ರಿಷಿಕೇಶ್‍ನಲ್ಲಿ ಏಮ್ಸ್ ಸ್ಥಾಪನೆ ಮಾಡಿರುವುದು ಹಾಗೂ 2014ರಲ್ಲಿ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮ ಸೇವೆಸಲ್ಲಿಸಿ ಸುಷ್ಮಾ ಅವರು ಎಲ್ಲರ ಹೆಗ್ಗಳಿಕೆ ಪಡೆದಿದ್ದರು.
ಸುಷ್ಮಾ ಸ್ವರಾಜ್ ನಿರ್ವಹಿಸಿದ ಹುದ್ದೆಗಳು:
1977-82 – ಹರಿಯಾಣ ಶಾಸಕಿಯಾಗಿ ಆಯ್ಕೆ
1977-79 – ಹರಿಯಾಣ ಕಾರ್ಮಿಕ ಮತ್ತು ಉದ್ಯೋಗ ಸಚಿವೆ
1982-90 – ಹರಿಯಾಣ ಎಂಎಲ್‍ಎ ಆಗಿ ಆಯ್ಕೆ
1982-90 – ಶಿಕ್ಷಣ, ಆಹಾರ & ನಾಗರಿಕ ಸರಬರಾಜು ಸಚಿವೆ
1990-96 – ರಾಜ್ಯಸಭೆಗೆ ಆಯ್ಕೆ
1996-97 – 11ನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
1996 – ಕೇಂದ್ರ ಮಾಹಿತಿ & ಪ್ರಸಾರ ಖಾತೆ ಸಚಿವೆ
1998 – ಹಾಜ್ ಖಾಸ್ ಕ್ಷೇತ್ರದಿಂದ ದೆಹಲಿ ಅಸೆಂಬ್ಲಿಗೆ ಆಯ್ಕೆ
1999 – ದೆಹಲಿ ಮುಖ್ಯಮಂತ್ರಿ
2000-06 – ರಾಜ್ಯಸಭಾ ಸದಸ್ಯೆ
2003-04 – ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವೆ
2006-09 – ರಾಜ್ಯಸಭಾ ಸದಸ್ಯೆ
2009-14 – 15ನೇ ಲೋಕಸಭಾ ಸದಸ್ಯೆ
2009 – ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
2009-14 – ಅಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
2014 – 16ನೇ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿ ವಿದೇಶಾಂಗ ಸಚಿವೆ ಆಗಿದ್ದರು.
ಮಂಗಳವಾರ ರಾತ್ರಿ ನಿಧನ ಹೊಂದಿರುವ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
https://www.youtube.com/watch?v=cBEdU1ss17Q