ಮಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಕ್ಕಾಗಿ ಏನೆಲ್ಲ ಕಸರತ್ತು ಮಾಡೋದನ್ನು ನೋಡಿದ್ದೀವಿ. ಆದರೆ ಇಲ್ಲೊಂದು ಗ್ರಾಮದಲ್ಲಿ ಊರಿನ ಜನರೇ ಒಂದು ಪಕ್ಷದ ನಾಯಕರಿಗೆ ಬಹಿಷ್ಕಾರ ಹಾಕಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ 200ಕ್ಕಿಂತಲೂ ಹೆಚ್ಚು ಹಿಂದೂಗಳ ಮನೆಯ ಗೋಡೆ ಮೇಲೆ ಕಾಂಗ್ರೆಸ್ ನಾಯಕರಿಗೆ ಪ್ರವೇಶವಿಲ್ಲ ಅನ್ನುವ ವಿಚಿತ್ರ ಬೋರ್ಡ್ ಹಾಕಲಾಗಿದೆ.
ಬೋರ್ಡ್ ನಲ್ಲಿ ಏನು ಬರೆಯಲಾಗಿದೆ?: ಇದು ಹಿಂದೂಗಳ ಮನೆ, ಗಣ್ಯಶ್ರೀ ಎಂಬ ಹೆಣ್ಮಗಳನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸಿಗರಿಗೆ ಈ ಮನೆಗೆ ಪ್ರವೇಶವಿಲ್ಲ. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂಬ ಎಚ್ಚರಿಕೆಯ ಫಲಕವನ್ನು ಮನೆ ಮುಂದಿನ ಗೋಡೆಯಲ್ಲಿ ನೇತು ಹಾಕಲಾಗಿದೆ.
ಒಂದು ವರ್ಷದ ಹಿಂದೆ ಗಣ್ಯಶ್ರೀ ಎಂಬ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯಮತೀಯ ಯುವಕನೊಬ್ಬ ಕೊನೆಗೆ ಮತಾಂತರ ಮಾಡಿದ್ದ. ಈ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಯುವಕನಿಗೆ ಸಹಾಯ ಮಾಡಿದ್ದರೆನ್ನಲಾಗಿದ್ದು, ಇದೀಗ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಕುಟುಂಬಗಳು ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೇರಳದಲ್ಲಿರೋ ಮನೆಗಳಲ್ಲಿ ‘ನಮ್ಮ ಮನೆಗಳಲ್ಲಿ ಹೆಣ್ಮಕ್ಕಳಿದ್ದಾರೆ, ಬಿಜೆಪಿ ನಾಯಕರಿಗೆ ಪ್ರವೇಶ ಇಲ್ಲ’ ಅನ್ನೋ ಪತ್ರ ಅಂಟಿಸಿದ್ದು ವೈರಲ್ ಆಗಿತ್ತು. ಈಗ ಹಿಂದೂಗಳ ಮನೆಗೆ ಕಾಂಗ್ರೆಸ್ ನಾಯಕರು ಬರುವಂತಿಲ್ಲ ಅನ್ನುವ ಎಚ್ಚರಿಕೆ ನೋಟಿಸ್ ಅಂಟಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.