ನವದೆಹಲಿ: ಲೋಕಸಭಾ ಚುನಾವಣೆ ಇಂದು ಹೊರ ಬಿದ್ದಿದ್ದು, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ ಪ್ರಿಯ ನಾಯಕರು. ವಿಜಯೋತ್ಸವಕ್ಕೆ ಕಾರಣವಾದ ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರು ಹಾಗೂ ದೇಶದ ಜನರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಇದು ಪಕ್ಷದ ಕಾರ್ಯಕರ್ತರ ಪರಿಶ್ರಮದ ಪ್ರತಿಫಲವಾಗಿದೆ. ಅಷ್ಟೇ ಅಲ್ಲ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದ ಜಯವಾಗಿದೆ ಎಂದು ಬಣ್ಣಿಸಿದರು.
Advertisement
ದೇಶದ ಜನರ ಬಡತನ ನಿವಾರಣೆಗೆ ಬಿಜೆಪಿ ನೇತೃತ್ವದ ಸರ್ಕಾರವು ಶ್ರಮಿಸಿದೆ. ಹೀಗಾಗಿ ಮತದಾರರು ನಮ್ಮನ್ನು ಮತ್ತೆ ಆಯ್ಕೆ ಮಾಡಿದ್ದಾರೆ. ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು 5 ವರ್ಷ ಆಡಳಿತ ನಡೆಸಿ, ಮತ್ತೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು ಇತಿಹಾಸ ಬರೆದಿದ್ದೇವೆ ಎಂದು ಹೇಳಿದರು.
Advertisement
ಮಹಾಮೈತ್ರಿ ಮೂಲಕ ನಮ್ಮನ್ನು ಸೋಲಿಸಲು ಪ್ರತಿಪಕ್ಷಗಳು ಒಂದಾಗಿದ್ದವು. ಆದರೆ ಈಗ ದೇಶದ ಎಲ್ಲ ರಾಜ್ಯದಲ್ಲಿಯೂ ಬಿಜೆಪಿಗೆ ಆಶೀರ್ವಾದ ಸಿಕ್ಕಿದೆ. ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು ಮತಗಳನ್ನು ನಾವು ಪಡೆದಿದ್ದೇವೆ ಎಂದು ತಿಳಿಸಿದರು.
Advertisement
ದೇಶದಿಂದ ಕಾಂಗ್ರೆಸ್ ಕಿತ್ತೆಸೆಯಲು ಬಿಜೆಪಿ ಎಲ್ಲ ಕಡೆಯೂ ಪ್ರಯತ್ನಿಸಿ ಯಶಸ್ವಿಯಾಗಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಣಿಪುರ, ಮಿಜೋರಾಮ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಅಂಡಮಾನ್-ನಿಕೋಬಾರ್, ಚಂಡೀಗಢ, ದಾದ್ರಾ-ನಗರ್ ಹವೇಲಿ, ದೀಯು-ದಮನ್ ಹಾಗೂ ಲಕ್ಷ ದ್ವೀಪದಲ್ಲಿ ಕಾಂಗ್ರೆಸ್ ಬಿಗ್ ಜೀರೋ (ಸೊನ್ನೆ) ಸಿಕ್ಕಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ಮುಚ್ಚಿಕೊಂಡಿದೆ ಎಂದು ವ್ಯಂಗ್ಯವಾಡಿದರು.
Advertisement
ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡರು. ಆದರೆ ಜನರು ಅವರನ್ನು ಕೈಬಿಟ್ಟು, ಬಿಜೆಪಿಯನ್ನು ಬೆಂಬಲಿಸಿದರು. ಈ ಮೂಲಕ ದೇಶದಲ್ಲಿ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಿ ಬಿಜೆಪಿಗೆ ಜಯ ಸಿಕ್ಕಿದೆ. ಇನ್ನು ಮುಂದೆ ದೇಶದಲ್ಲಿ ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿಗೆ ಯಾವುದೇ ಮಹತ್ವ ಇರುವುದಿಲ್ಲ ಎಂದು ಗುಡುಗಿದರು.
ಎಕ್ಸಿಟ್ ಪೋಲ್ ಸಮೀಕ್ಷೆಗಳು ಸುಳ್ಳು ಎಂದು ವಿಪಕ್ಷ ನಾಯಕರು ಟೀಕೆ ಮಾಡಿದರು. ಅಷ್ಟೇ ಅಲ್ಲ ತಕ್ಷಣವೇ ದೆಹಲಿಯಲ್ಲಿ ಅಲೆದಾಡಿ ಮೈತ್ರಿ ಮಾತುಕತೆ ನಡೆಸಿದರು. ಕುಟುಂಬ ರಾಜಕಾರಣ ನಡೆಸುವ ಪಕ್ಷಗಳನ್ನು ಒಂದು ಕಡೆ ಸೇರಿಸಲು ಓಡಾಡಿದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಹಾಮೈತ್ರಿ ನಾಯಕರನ್ನು ಸೇರಿ ಸಲು ಭಾರೀ ಪರಿಶ್ರಮ ಪಟ್ಟರು. ಆದರೆ ರಾಜ್ಯದಲ್ಲಿಯೇ ಅಧಿಕಾರ ಕಳೆದುಕೊಂಡರು ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಗಳು ಕೂಡ ನಡೆದವು. ಇಂದು ಬಂದ ಫಲಿತಾಂಶದ ಪ್ರಕಾರ ಆಂಧ್ರಪ್ರದೇಶದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಬಹುಮತ ಸಾಧಿಸಿದೆ. ಈ ಮೂಲಕ ಜಗನ್‍ಮೋಹನ್ ರೆಡ್ಡಿ ಆಂಧ್ರಪ್ರದೇಶವನ್ನು ಮುನ್ನಡೆಸಲಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಹಾಗೂ ಸಿಕ್ಕಿಂನಲ್ಲಿ ಪವನ್ ಕುಮಾರ್ ಜಾಮ್ಲಿಂಗ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಅವರಿಗೂ ಅಭಿನಂದನೆ ತಿಳಿಸುತ್ತೇನೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮೊದಲ ಬಾರಿ ಸಂಪೂರ್ಣ ಬಹುಮತ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರು, ಪ್ರಚಾರಕ್ಕೆ ಅಡ್ಡಿ ಉಂಟುಮಾಡಿದರೂ ನಾವು 18 ಸ್ಥಾನ ಪಡೆದಿದ್ದೇವೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಬರುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ ಎಂದು ಹೇಳುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಏರುತ್ತೇವೆ ಎಂದು ಭವಿಷ್ಯ ನುಡಿದರು.