Connect with us

Crime

ಗರ್ಲ್ ಫ್ರೆಂಡ್ಸ್ ಜೊತೆ ಲಾಂಗ್ ರೈಡಿಗೆ 28 ಬೈಕ್ ಕದ್ದ!

Published

on

– ಬೈಕ್ ಇಲ್ಲಾಂದ್ರೆ ಬರಲ್ಲ ಅಂತಾರಂತೆ ಗರ್ಲ್ ಫ್ರೆಂಡ್
– ಬೈಕ್ ಕದ್ದಿದ್ದಕ್ಕೆ 5ನೇ ಬಾರಿ ಜೈಲು ಸೇರಿದ ಅಜರ್

ಹೈದರಾಬಾದ್: ಪ್ರೇಮಿಗಳು ಬೈಕ್ ನಲ್ಲಿ ಸುತ್ತಾಡೋದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಗರ್ಲ್ ಫ್ರೆಂಡ್ಸ್ ಗಾಗಿ 28 ಬೈಕ್ ಗಳನ್ನೇ ಕದ್ದಿರೋ ಘಟನೆ ನಡೆದಿದೆ.

ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈತ 4 ಬಾರಿ ಜೈಲಿಗೆ ಹೋಗಿದ್ದರೂ ಈತನಿಗೆ ಬುದ್ಧಿ ಬಂದಿಲ್ಲ. ಮತ್ತೆ ಮತ್ತೆ ಬೈಕ್ ಕಳ್ಳತನವನ್ನೇ ಮಾಡುತ್ತಿರುವ ಈತ ಈಗ ಹೈದರಾಬಾದ್ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದಾನೆ.

ಸಾಮಾನ್ಯವಾಗಿ ಬೈಕ್ ಕಳ್ಳತನ ಮಾಡಿದವರು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಾರೆ. ಆದರೆ ಬೇಗಂಪೇಡೆಯ ಪಾತಿಗಡ್ಡದ ಅಜರ್ ಹುಸೇನ್ ಬೈಕ್ ಗಳನ್ನು ಕದ್ದು ಯಾವತ್ತೂ ಮಾರಾಟ ಮಾಡಿಲ್ಲ. ಬದಲಾಗಿ ಕದ್ದಾಗ ಬೈಕ್ ನಲ್ಲಿದ್ದ ಪೆಟ್ರೋಲ್ ನಲ್ಲಿ ಎಷ್ಟು ದೂರಕ್ಕೆ ಹೋಗುತ್ತೋ ಅಲ್ಲಿಯವರೆಗೆ ಹೋಗಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆಯೇ ಬೈಕ್ ಅಲ್ಲೇ ಬಿಟ್ಟು ಜಾಗ ಖಾಲಿ ಮಾಡುತ್ತಾನೆ.

ಅಷ್ಟಕ್ಕೂ ಈತ ಬೈಕ್ ಕಳ್ಳತನ ಮಾಡೋದು ಯಾಕೆ ಅಂತಾ ಕೇಳಿದ್ರೆ ವಿಚಿತ್ರವಾದ ವಿಷಯ ಬಿಚ್ಚಿಡ್ತಾನೆ ಅಜರ್. ಈತನಿಗೆ ಈಗಾಗಲೇ ಮದುವೆ ಆಗಿದೆ. ಆದರೆ ಹೆಂಡ್ತಿಗೆ ಡೈವೋರ್ಸ್ ಕೊಟ್ಟಿದ್ದಾನೆ. ಬಳಿಕ ನಗರದ ಕೆಲವು ಮಹಿಳೆಯರ ಜೊತೆ ಗೆಳೆತನ ಬೆಳೆಸಿದ್ದಾನೆ. ನಂತರ ಇವರನ್ನು ಲಾಂಗ್ ರೈಡ್ ಗೆ ಕರೆದುಕೊಂಡು ಹೋಗುತ್ತಾನೆ. ತನ್ನ ಈ ಗರ್ಲ್ ಫ್ರೆಂಡ್ ಗಳನ್ನು ಸುತ್ತಾಡಿಸಲೆಂದೇ ಬೈಕ್ ಕಳ್ಳತನಕ್ಕೆ ಇಳಿದಿದ್ದಾನೆ. ಇದುವರೆಗೆ ಪೊಲೀಸರು 4 ಬಾರಿ ಅಜರ್ ನನ್ನು ಬಂಧಿಸಿದ್ದಾರೆ. ಗರ್ಲ್ ಫ್ರೆಂಡ್ ಗಳು ಇದ್ದಾಗ ಮಾತ್ರ ಪೆಟ್ರೋಲ್ ಹಾಕಿಸ್ತಾನೆ ಅನ್ನೋದು ಬಿಟ್ಟರೆ ಉಳಿದ ಟೈಮ್ ಬೈಕ್ ಎಲ್ಲಿ ನಿಲ್ಲುತ್ತೋ ಅಲ್ಲೇ ಪಾರ್ಕ್ ಮಾಡಿ ಪರಾರಿಯಾಗ್ತಾನೆ ಅಜರ್.

ಪ್ರತಿ ಬಾರಿ ಪೊಲೀಸ್ ತನಿಖೆ ಮಾಡಿದಾಗಲೂ, ಬೈಕ್ ಇಲ್ಲ ಎಂದರೆ ಗರ್ಲ್ ಫ್ರೆಂಡ್ ನನ್ನ ಜೊತೆ ಬರಲ್ಲ ಅಂತಾರೆ. ಹೀಗಾಗಿ ನಾನು ಬೈಕ್ ಕದ್ದಿದ್ದೇನೆ ಎನ್ನುತ್ತಾನೆ. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಗೆ ಬರುತ್ತಾನೆ. ಇದೇ ಮಂಗಳವಾರ ಅಜರ್ 5ನೇ ಬಾರಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.

Click to comment

Leave a Reply

Your email address will not be published. Required fields are marked *