Connect with us

Cricket

40 ಸಿಕ್ಸ್ ಬಾರಿಸಿ ತ್ರಿಶತಕ, ಐವರು ‘ಶೂನ್ಯ’ಕ್ಕೆ ಔಟ್! – ಆದ್ರೆ ತಂಡದ ಮೊತ್ತ 354/9

Published

on

ಬೆಂಗಳೂರು: ಒಂದು ಕಾಲವಿತ್ತು. ಆಗ ಯಾರಾದ್ರೂ ಕ್ರಿಕೆಟ್ ನಲ್ಲಿ ಒಂದು ದಾಖಲೆ ಮಾಡಿದರೆ ಅದನ್ನು ಮುರಿಯೋಕೆ ವರ್ಷಾನುಗಟ್ಟಲೆ ಕಾಯಬೇಕಿತ್ತು. ಆದರೆ ಯಾವಾಗ ಟಿ20 ಎಂಬ 20 ಓವರ್ ಗಳ ಆಟ ಆರಂಭವಾಯಿತೋ ಬ್ಯಾಟ್ಸ್ ಮ್ಯಾನ್ ಗಳೆಲ್ಲಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಬಹುತೇಕ ಪಂದ್ಯಗಳಲ್ಲಿ ರನ್ ಮಳೆಯೇ ಹರಿಯ ತೊಡಗಿತು.

ಇಂಥದ್ದೇ ಒಂದು ಪಂದ್ಯ ಕಳೆದ ವಾರ ಆಸ್ಟ್ರೇಲಿಯಾದಲ್ಲಿ ನಡೆಯಿತು. 35 ಓವರ್ ಗಳ ಪಂದ್ಯದಲ್ಲಿ ಆಟಗಾರನೊಬ್ಬ ಆಕ್ರಮಣಕಾರಿ ಆಟವಾಡಿ ತ್ರಿಶತಕ ದಾಖಲಿಸಿದ್ದಾನೆ. ಈ ತ್ರಿಶತಕದಲ್ಲಿ ಆತ 40 ಸಿಕ್ಸರ್ ಗಳನ್ನು ಬಾರಿಸಿದ್ದ ಎಂಬುದು ವಿಶೇಷ. ಅಂದ ಹಾಗೆ ಆತನ ಹೆಸರು ಜೋಶ್ ಡನ್ಸ್ಟನ್. ಜೋಶ್ ಈ ತ್ರಿಶತಕದ ಜೊತೆ ಇನ್ನಷ್ಟು ದಾಖಲೆಗಳಿಗೂ ಸಾಕ್ಷಿಯಾಗಿದ್ದಾನೆ. ಈ ಪಂದ್ಯದಲ್ಲಿ ಜೋಶ್ ಒಬ್ಬನೇ 307 ರನ್ ಗಳಿಸಿದರೂ ತಂಡದ ಮೊತ್ತ 35 ಓವರ್ ಗಳಲ್ಲಿ ಆಗಿದ್ದು 354 ಮಾತ್ರ.

ಸೆಂಟ್ರಲ್ ಸ್ಟರ್ಲಿಂಗ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಆಗಸ್ಟಾ ತಂಡ ನಿಗದಿತ 35 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು. ಇದರಲ್ಲಿ 307 ರನ್ ಬಾರಿಸಿದ್ದು ಡನ್ಸ್ಟನ್. ಅರ್ಥಾತ್ ತಂಡದ ಒಟ್ಟು ಮೊತ್ತದ ಶೇ.86.72 ರನ್ ಡನ್ಸ್ಟನ್ ಗಳಿಸಿದ್ದ. ಈ ಮೂಲಕ ಈ ಹಿಂದೆ ವಿವಿಯನ್ ರಿಚರ್ಡ್ಸ್ ಹೆಸರಲ್ಲಿದ್ದ ದಾಖಲೆಯನ್ನು ಸುಲಭವಾಗಿ ತನ್ನದಾಗಿಸಿಕೊಂಡಿದ್ದಾನೆ.

33 ವರ್ಷ ಹಿಂದಿನ ದಾಖಲೆ ನುಚ್ಚುನೂರು: 33 ವರ್ಷ ಹಿಂದೆ ವಿವಿಯನ್ ರಿಚರ್ಡ್ಸ್ 1984ರಲ್ಲಿ ಇಂಗ್ಲೆಂಡ್ ವಿರುದ್ಧ 189 ರನ್ ಗಳಿಸಿದ್ದರು. ಆದರೆ ರಿಚರ್ಡ್ಸ್ ಅವರಿದ್ದ ವಿಂಡೀಸ್ ತಂಡ ಕೇವಲ 272 ರನ್ ಮಾತ್ರ ಗಳಿಸಿತು. ಅಂದ್ರೆ ಒಟ್ಟು ರನ್ ಗಳ ಶೇ.69.48ರಷ್ಟು ರನ್ ಗಳನ್ನು ವಿವಿಯನ್ ರಿಚರ್ಡ್ಸ್ ಬಾರಿಸಿದ್ದು. ಇದೇ ಈವರೆಗಿನ ಒಬ್ಬ ಆಟಗಾರನ ಗರಿಷ್ಠ ಶೇಕಡಾವಾರು ರನ್ ಆಗಿತ್ತು.

ಪಂಚ ‘ಶೂನ್ಯ’ಗಳು: ಮತ್ತೂ ವಿಶೇಷವೆಂದರೆ ಒಂದು ಕಡೆ ಜೋಶ್ ಬ್ಯಾಟಿಂಗ್ ಪ್ರತಾಪ ಮುಂದುವರೆಸಿದ್ದರೆ, ಇನ್ನೊಂದೆಡೆ ತಂಡದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರು. ತಂಡದ ಐವರು ಆಟಗಾರರು ಶೂನ್ಯಕ್ಕೆ ಔಟಾದರು. 307 ರನ್ ಗಳಿಸಿದ್ದ ಜೋಶ್ ರನ್ ಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಇನ್ನೋರ್ವ ಆಟಗಾರ ಗಳಿಸಿದ 18 ರನ್ 2ನೇ ಗರಿಷ್ಠ ಮೊತ್ತವಾಗಿತ್ತು. ಬಾಕಿ ಆಟಗಾರರೆಲ್ಲಾ ಎರಡಂಕಿ ರನ್ ದಾಖಲಿಸಲ್ಲೂ ವಿಫಲರಾಗಿ ಪೆವಿಲಿಯನ್ ಸೇರಿದ್ದರು.

207 ರನ್ ಜೊತೆಯಾಟದಲ್ಲಿ ಒಬ್ಬ ಗಳಿಸಿದ್ದು 5 ರನ್ ಮಾತ್ರ!: 7ನೇ ವಿಕೆಟ್ ಗೆ ಜೋಶ್ ಮತ್ತೊಬ್ಬ ಆಟಗಾರನ ಜೊತೆ ಸೇರಿ 207 ರನ್ ಗಳ ಜೊತೆಯಾಟ ನೀಡಿದರು. ಆದರೆ ಇದರಲ್ಲಿ ಸಹ ಆಟಗಾರ ಗಳಿಸಿದ್ದು ಕೇವಲ 5 ರನ್ ಎಂಬುದು ಕೂಡಾ ಈ ಪಂದ್ಯದ ವಿಶೇಷತೆಯಾಗಿತ್ತು.

Click to comment

Leave a Reply

Your email address will not be published. Required fields are marked *