Connect with us

Latest

1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

Published

on

ತಿರುವನಂತಪುರಂ: ರೋಗಿಯ ಪ್ರಾಣ ಉಳಿಸಲು ಆಂಬುಲೆನ್ಸ್ ಗಳು ಸೂಕ್ತ ಸಮಯಕ್ಕೆ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವುದು ತುಂಬಾ ಮುಖ್ಯವಾಗುತ್ತದೆ. ಹೀಗೆ ಒಂದು ತಿಂಗಳ ಮಗುವಿನ ಪ್ರಾಣ ಉಳಿಸುವ ಸಲುವಾಗಿ ಆಂಬುಲೆನ್ಸ್ ಚಾಲಕರೊಬ್ಬರು ಉತ್ತರ ಕಣ್ಣೂರು ನಗರದಿಂದ ಕೇರಳ ರಾಜಧಾನಿ ತಿರುವನಂತಪುರಂವರೆಗೆ ಆಂಬುಲೆನ್ಸ್ ನಲ್ಲಿ 7 ಗಂಟೆ ಸಮಯದಲ್ಲಿ ಬರೋಬ್ಬರಿ 516 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾರೆ.

ಗೂಗಲ್ ಮ್ಯಾಪ್‍ನ ಪ್ರಕಾರ ನೋಡಿದರೆ ಸ್ವಲ್ಪ ಟ್ರಾಫಿಕ್ ನಡುವೆ ಇಷ್ಟು ದೂರವನ್ನು ಕ್ರಮಿಸಲು ಬರೋಬ್ಬರಿ 13 ಗಂಟೆ ಸಮಯ ಬೇಕು. ಅದರಲ್ಲೂ ಕೇರಳದ ಕಿರಿದಾದ ರಸ್ತೆಗಳಲ್ಲಿ ವಾಹನದಟ್ಟಣೆ ನೋಡಿದ್ರೆ ಸುಮಾರು 14 ಗಂಟೆಗಳೇ ಬೇಕಾಗಬಹುದು. ಹೀಗಿದ್ದರೂ ಆಂಬುಲೆನ್ಸ್ ಚಾಲಕ ಕೇವಲ 7 ಗಂಟೆಗಳಲ್ಲಿ ಆಸ್ಪತ್ರೆಗೆ ಮಗುವನ್ನ ರವಾನಿಸಿದ್ದಾರೆ. 15 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದನ್ನು ಕಡಿತಗೊಳಿಸಿದ್ರೆ ಇವರ ಪ್ರಯಾಣ 6 ಗಂಟೆ 45 ನಿಮಿಷಕ್ಕೆ ಇಳಿಯುತ್ತದೆ. ಅಂದ್ರೆ ಸರಾಸರಿ ವೇಗ ಗಂಟೆಗೆ 76.4 ಕಿ.ಮೀ ಆಗುತ್ತದೆ.

ಆಂಬುಲೆನ್ಸ್ ಓಡಿಸುತ್ತಿದ್ದ ಚಾಲಕ ತಮೀಮ್. ಇವರು ಮೂಲತಃ ಕಾಸರಗೋಡಿನವರು. ಬುಧವಾರ ರಾತ್ರಿ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಿಂದ ತಮೀಮ್ ಅವರಿಗೆ ಕರೆ ಬಂದಿತ್ತು. 31 ದಿನಗಳ ಪುಟ್ಟ ಕಂದಮ್ಮ ಫಾತೀಮಾ ಲಬಿಯಾಳನ್ನು ಕಣ್ಣೂರಿನಿಂದ ತಿರುವನಂತಪುರಂನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.

ಏರ್ ಆಂಬುಲೆನ್ಸ್ ವ್ಯವಸ್ಥೆಗೆ 5 ಗಂಟೆ ಬೇಕಿತ್ತು:  ಮಗು ವಾರದಿಂದ ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ವಿಮಾನದಲ್ಲಿ ಕರೆದುಕೊಂಡು ಹೋಗೋಣವೆಂದರೆ ಹತ್ತಿರದ ಮಂಗಳೂರು ಮತ್ತು ಕ್ಯಾಲಿಕಟ್ ವಿಮಾನ ನಿಲ್ದಾಣಗಳ ನಡುವೆ ಪ್ರಯಾಣಿಸಲು 3 ಗಂಟೆ ಬೇಕಿತ್ತು. ಆದ್ರೆ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕನಿಷ್ಠ 5 ಗಂಟೆ ಸಮಯ ಬೇಕಿತ್ತು. ಆದ್ದರಿಂದ ರಸ್ತೆ ಮಾರ್ಗದಲ್ಲೇ ಮಗುವನ್ನ ಕಣ್ಣೂರಿನಿಂದ ತಿರುವನಂತಪುರಂಗೆ ರವಾನಿಸಲು ತೀರ್ಮಾನಿಸಿದ್ದರು.

ಪೊಲೀಸ್, ಎನ್‍ಜಿಓ ಸಹಾಯ: ಮುಂದೆ ನಡೆದಿದ್ದೆಲ್ಲವೂ ಸಿನಿಮಾ ರೀತಿಯಲ್ಲಿತ್ತು. ತಮೀಮ್ ತನಗೆ ನಿಯೋಜಿಸಿದ ಕೆಲಸವನ್ನ ಕೈಗೆತ್ತಿಕೊಂಡ್ರು. ಕೇರಳ ಪೊಲೀಸರು ಆಂಬುಲೆನ್ಸ್ ಗಾಗಿ ರಸ್ತೆ ಅನುವು ಮಾಡಿಕೊಟ್ಟರು. ಇದರಲ್ಲಿ ಭಾಗಿಯಾದ ಮೊದಲ ಅಧಿಕಾರಿ ಕಣ್ಣೂರಿನ ಜಿಲ್ಲಾ ಪೊಲೀಸ್ ಮುಖ್ಯಸ್ಥರು. ಇಡೀ ಪ್ರಯಾಣದ ಜೊತೆ ಸಹಕರಿಸಲು ವಿಶೇಷ ತಂಡವನ್ನು ರಚಿಸಿದ್ರು. ಆಂಬುಲೆನ್ಸ್ ಜೊತೆಗೆ ಹೋಗಲು ಒಂದು ತಂಡ ಹಾಗೂ ತಮೀಮ್ ಅವರ ವಾಹನ ಹೋಗುವ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಮತ್ತೊಂದು ತಂಡವನ್ನು ರಚಿಸಿದ್ದರು. ಕೇವಲ ರಾಜ್ಯ ಪೊಲೀಸರಷ್ಟೇ ಅಲ್ಲ, ಮಗುವಿನ ಪ್ರಯಾಣದ ಬಗ್ಗೆ ವಿಷಯ ತಿಳಿದು ಕೇರಳ ಚೈಲ್ಡ್ ಪ್ರೊಟೆಕ್ಷನ್ ಟೀಮ್ ಎಂಬ ಎನ್‍ಜಿಓ ಕೂಡ ಪೊಲೀಸರೊಂದಿಗೆ ಕೈ ಜೋಡಿಸಿದ್ರು.

ಆಂಬುಲೆನ್ಸ್ ನೋಡಲು ರಸ್ತೆಗಳಲ್ಲಿ ನಿಂತ್ರು ಜನ: ಬುಧವಾರ ರಾತ್ರಿ 8.23ಕ್ಕೆ ತಮೀಮ್ ಆಂಬುಲೆನ್ಸ್ ನ ಸೈರನ್ ಆನ್ ಮಾಡಿ ತಿರುವನಂತಪುರಂವರೆಗಿನ 516 ಕಿ.ಮೀ ಪ್ರಯಾಣವನ್ನ ಆರಂಭಿಸಿದ್ದರು. ಚೈಲ್ಡ್ ಪ್ರೊಟೆಕ್ಷನ್ ಟೀಂ ಸಹಾಯದಿಂದ ಆಂಬುಲೆನ್ಸ್ ಪ್ರಯಾಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಜನ ಆಂಬುಲೆನ್ಸ್ ನೋಡಲೆಂದೇ ರಸ್ತೆಗಳಲ್ಲಿ ನಿಂತಿದ್ದರು. ಕೆಲವರು ಮೊಬೈಲ್‍ನಲ್ಲಿ ಇದನ್ನ ವಿಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಒಂದೇ ಒಂದು ಸ್ಟಾಪ್: ಆಂಬುಲೆನ್ಸ್ ಜೊತೆಗೆ ಕೇರಳ ಪೊಲೀಸರ ಎರಡು ಎಸ್‍ಯುವಿ ವಾಹನಗಳಿದ್ದವು. ತಮೀಮ್ ವಾಹನವನ್ನು ನಿಧಾನಗೊಳಿಸದಂತೆ ನೋಡಿಕೊಳ್ಳಲು ಜಿಲ್ಲಾ ಗಡಿಗಳಲ್ಲಿ ಎಸ್‍ಯುವಿ ವಾಹನಗಳು ಬದಲಾವಣೆಯಾಗುತ್ತಿದ್ದವು. ಸುಮಾರು 11 ಗಂಟೆಯ ವೇಳೆಗೆ ವಾಹನಗಳು ಕೋಝಿಕೋಡ್‍ನ ಕಾಕಡು ನಲ್ಲಿನ ಪೆಟ್ರೋಲ್ ಬಂಕ್ ತಲುಪಿದ್ದವು. ಇಡೀ ಪ್ರಯಾಣದಲ್ಲಿ ಇದೊಂದೇ ಕಡೆ ವಾಹನವನ್ನ ನಿಲ್ಲಿಸಿದ್ದು.

ಕೊನೆಗೆ ಗುರುವಾರ ನಸುಕಿನ ಜಾವ 3.23ರ ವೇಳೆಗೆ ಆಂಬುಲೆನ್ಸ್ ತಿರುವನಂತಪುರಂನ ಆಸ್ಪತ್ರೆ ತಲುಪಿತು. ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೂಡಲೇ ಮಗುವನ್ನ ಒಳಗೆ ಕರೆದೊಯ್ದರು.

100-120 ಕಿ.ಮೀ ವೇಗದಲ್ಲಿದ್ದೆ: ಇಂತದ್ದೊಂದು ಪ್ರಯಾಸಕರ ಪ್ರಯಾಣದ ನಂತರ ಮಾತನಾಡುವಾಗ ತಮೀಮ್ ತಾನು ಮಾಡಿದ ಈ ದೊಡ್ಡ ಕೆಲಸದ ಶಾಕ್‍ನಿಂದ ಇನ್ನೂ ಹೊರಬಂದಿರಲಿಲ್ಲ. ಪೊಲೀಸರು ಹಾಗೂ ಚೈಲ್ಡ್ ಪ್ರೊಟೆಕ್ಷನ್ ಟೀಂ ನ ಕೆಲಸವನ್ನು ಹೊಗಳಿದ ತಮೀಮ್, ಇವರ ಸಹಾಯ ಮತ್ತು ಬೆಂಬಲ ಇಲ್ಲದಿದ್ರೆ ಈ ಯಶಸ್ವಿ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ರು. ಬಹುತೇಕ 100-120 ಕಿ.ಮೀ ವೇಗದಲ್ಲಿ ನಾನಿದ್ದೆ. ಎರಡೂ ತಂಡಗಳ ಪರಿಶ್ರಮಕ್ಕೆ ಧನ್ಯವಾದ ಎಂದು ಅವರು ಹೇಳಿದ್ರು.

ಇಡೀ ಪ್ರಯಾಣಕ್ಕೆ ಮುಖ್ಯ ಕಾರಣವಾಗಿದ್ದ ಮಗು ಫಾತೀಮಾ ಸರಿಯಾದ ಸಮಯಕ್ಕೆ ಆಸ್ಪತೆಯೇನೋ ತಲುಪಿದೆ. ಆದ್ರೆ ಮಗುವಿನ ಸ್ಥಿತಿ ಇನ್ನೂ ಚಿಂತಾನಕವಾಗಿದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *