ಬಾಗಲಕೋಟೆ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಚಲನಚಿತ್ರದ ತಂಡವೊಂದು ವಿನೂತನ ಹೆಜ್ಜೆ ಇಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ “ಥರ್ಡ್ ಕ್ಲಾಸ್” ಚಿತ್ರತಂಡ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗುತ್ತಿದೆ.
ಈ ಚಿತ್ರತಂಡ ಆಡಿಯೋ ರಿಲೀಸ್ ಸಂದರ್ಭದಲ್ಲೇ ಆಟೋ ಚಾಲಕರು, ಅನಾಥ-ಅಂಧ ಮಕ್ಕಳಿಗೆ ಜೀವ ವಿಮೆ ಮಾಡಿಸುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಮತ್ತೆ ಚಿತ್ರದ ನಿರ್ಮಾಪಕ, ನಟ ಜಗದೀಶ್ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಗ್ರಾಮವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಿ ನಿಂತಿದ್ದು, ಅದರ ಪ್ರಯುಕ್ತ ಚಿತ್ರತಂಡ ಗ್ರಾಮದಲ್ಲೇ ಗ್ರಾಮ ವಾಸ್ತವ್ಯ ಹೂಡಿದೆ.
Advertisement
Advertisement
ಚಿತ್ರತಂಡ ರಾತ್ರಿ ಶಾಲಾ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಹಾಡಿ, ಕುಣಿದು, ಅವರೊಂದಿಗೆ ಬೆರೆತು ಮಕ್ಕಳಿಗೆ ಊಟ ಬಡಿಸಿ ಸಾಮಾಜಿಕ ಕಳಕಳಿ ಮೆರೆದಿದೆ. ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ಮಕ್ಕಳೊಂದಿಗೆ ಹೆಜ್ಜೆ ಹಾಕಿ, ಅವರೊಂದಿಗೆ ಊಟ ಮಾಡಿ, ಊಟ ಬಡಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ಪ್ರವಾಹದಲ್ಲಿ ಮನೆ ಹಾಗೂ ಶಾಲೆ ಕಳೆದುಕೊಂಡ ಸಂತ್ರಸ್ತ ಶಾಲಾ ಮಕ್ಕಳ ಪರವಾಗಿ ನಿಂತಿರುವ ಚಿತ್ರತಂಡದ ಕಾರ್ಯ ಸದ್ಯ ಶ್ಲಾಘನೆಗೆ ಕಾರಣವಾಗಿದೆ.
Advertisement
Advertisement
ಗ್ರಾಮದ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯ ಕಟ್ಟಡ ಮಲಪ್ರಭೆ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆ ಶಾಲೆಯ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿ ಇಂದು (ಜನವರಿ 20) ಕಾಮಗಾರಿ ಆರಂಭಿಸಲಿದೆ. ಚಿತ್ರ ತಂಡದ ಈ ಕಾರ್ಯ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಈ ಚಿತ್ರ ಬರುವ ಫೆ. 2ರಂದು ತೆರೆ ಕಾಣಲಿದೆ. ಈ ಕುರಿತು ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ತಮ್ಮ ಸಾಮಾಜಿಕ ಕಳಕಳಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.