-ಸರ್ಕಾರ ರಚನೆಗೂ ಮುನ್ನವೇ ಮಂತ್ರಿಗಿರಿ ಕುರ್ಚಿಗೆ ಟವೆಲ್
ಚಿತ್ರದುರ್ಗ: ಬಿಎಸ್ ಯಡಿಯೂರಪ್ಪ ಅವರು ಇನ್ನೂ ಸಿಎಂ ಆಗಿಲ್ಲ. ಅದಾಗಲೇ ಮಂತ್ರಿಗಿರಿ ಜಪ ಮಾಡಲು ಆರಂಭವಾಗಿದೆ. ನಾನು 6 ಬಾರಿ ಶಾಸಕನಾಗಿದ್ದೇನೆ. ಹೀಗಾಗಿ ನನ್ನ ಹಿರಿತನವನ್ನ ಬಿಎಸ್‍ವೈ ಗುರುತಿಸಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮಂತ್ರಿ ಸ್ಥಾನದ ಲಾಭಿ ಆರಂಭಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನೀರಾವರಿ, ಅಭಿವೃದ್ಧಿ ದೃಷ್ಟಿಯಿಂದ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪ ಮತ್ತು ರಾಷ್ಟ್ರ, ರಾಜ್ಯದ ನಾಯಕರು ನನ್ನ ಹಿರಿತನವನ್ನು ಗಮನಕ್ಕೆ ತೆಗೆದುಕೊಂಡು ನನಗೂ ಒಂದು ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆಯಿಂದೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಗೆ ಪ್ರತಿ ಬಾರಿಯೂ ಹೊರಗಿನವರನ್ನೇ ಮಂತ್ರಿಗಳನ್ನಾಗಿ ಮಾಡಲಾಗುತ್ತಿದೆ. ಹೀಗಾಗಿ ಅವರು ನಮ್ಮ ಜಿಲ್ಲೆಯತ್ತ ಒಂಚೂರು ಕಾಳಜಿ ವಹಿಸುತ್ತಿಲ್ಲ. ಸುಮಾರು 15 ವರ್ಷಗಳಿಂದ ನಮ್ಮ ಜಿಲ್ಲೆಯವರೇ ಮಂತ್ರಿಗಳಾಗದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಹಾಗೂ ನಮ್ಮ ಜಿಲ್ಲೆಯ ಅನೇಕ ಸಮಸ್ಯೆಗಳು ಅಂದರೆ ತುಂಗಾಭದ್ರಾ, ಹಿನ್ನೀರಿನ ಸಮಸ್ಯೆ, ಮೆಡಿಕಲ್ ಕಾಲೇಜು, ರೈಲ್ವೇ, ರೈತರಿಗೆ ನೀರಾವರಿ ಯೋಜನೆ ಹೀಗೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲು ನನಗೂ ಒಂದು ಅವಕಾಶ ಕೊಡಬೇಕು ಎಂದು ತಿಪ್ಪಾರೆಡ್ಡಿ ಕೇಳಿಕೊಂಡಿದ್ದಾರೆ.
ನಾಳೆ ಸಮ್ಮಿಶ್ರ ಸರ್ಕಾರದ ಆಡಳಿತ ಅಂತ್ಯವಾಗಲಿದೆ. ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಬರುವ ವಿಶ್ವಾಸವಿದೆ. ಬಿಜೆಪಿ ಸರ್ಕಾರದಲ್ಲಿ ಈ ಬಾರಿ ನಾನು ಮಂತ್ರಿಯಾಗುವ ನಂಬಿಕೆ ಇದೆ. ಜಿಲ್ಲೆಯ ನೀರಾವರಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.