– ಶ್ರೀರಾಮ ಮಂದಿರ ನಿರ್ಮಾಣವಾಗಿದೆ
– ಕಾಶಿ, ಉಜ್ಜಯಿನಿ, ಬದ್ರಿನಾಥ್ ಕಾರಿಡಾರ್ ಅಭಿವೃದ್ಧಿ ಆಗಿವೆ
ಮೈಸೂರು: ಅಯೋಧ್ಯೆಯಲ್ಲಿ (Ayodhya) ಸುತ್ತೂರಿನ (Sutturu) ಶಾಖಾ ಮಠ ನಿರ್ಮಾಣ ಮಾಡಲು ಸ್ವಾಮೀಜಿ ತೀರ್ಮಾನ ಮಾಡಿದ್ದಾರೆ. ಇದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದಾರೆ.
Advertisement
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ (Sutturu Fair Festival) ಪಾಲ್ಗೊಂಡು ಮಾತನಾಡಿದ ಅವರು, ಮೊಟ್ಟಮೊದಲು ಜಗದ್ಗುರು ಪೂಜ್ಯ ಸ್ವಾಮೀಜಿಯವರಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಈ ಮೊದಲು 24 ಮಠಾಧೀಶರು ಈ ಮಠದಲ್ಲಿ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನೆಲ್ಲರನ್ನು ನಾನು ಸ್ಮರಿಸುತ್ತೇನೆ. ಇದರ ಜೊತೆಗೆ ಕರ್ನಾಟಕದ ಈ ಪವಿತ್ರ ಮಣ್ಣಿನಲ್ಲಿ ನಿಂತು ನಾನು ಬಸವಣ್ಣನವರನ್ನು ನೆನೆಸುತ್ತೇನೆ. ಬಸವಣ್ಣನವರು ಕೇವಲ ಒಂದು ವರ್ಗಕ್ಕೆ ಅಲ್ಲ. ದೇಶದ ಹಾಗೂ ಜಗತ್ತಿನ ಕೋಟಿಕೋಟಿ ಜನಕ್ಕೆ ಪ್ರೇರಣೆ, ಭಕ್ತಿಯ ಭಾವನೆಯನ್ನು ತುಂಬಿದಂತಹ ಒಬ್ಬ ಮಹಾಪುರುಷರು. ಸುತ್ತೂರು ಮಠದ 24 ಮಠಾಧೀಶರು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಲಕ್ಷಾಂತರ ಜನರ ಮನಸ್ಸಲ್ಲಿ ಒಂದು ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ಅವರ ಈ ಸೇವೆ ಹಾಗೂ ಕೊಡುಗೆಯನ್ನು ಸದಾ ಗುರುತಿಸುತ್ತದೆ ಎಂದರು.
Advertisement
Advertisement
ನಾನು ಶನಿವಾರ ಇಲ್ಲಿ ಬರುವುದಿತ್ತು. ಪಾರ್ಲಿಮೆಂಟ್ ಸಭೆಯನ್ನು ಒಂದು ದಿನ ಮುಂದೂಡಿದ್ದರಿಂದ ಇವತ್ತು ಬರಬೇಕಾಯಿತು. ಅಹಮದಾಬಾದ್ ಪ್ರವಾಸವನ್ನು ರದ್ದುಗೊಳಿಸಿದಾಗ ಅಲ್ಲಿನ ಪತ್ರಕರ್ತರು ಯಾಕೆ ಅಹಮದಾಬಾದ್ ಪ್ರವಾಸ ರದ್ದುಗೊಳಿಸಿದಿರಿ ಎಂದು ಕೇಳಿದರು. ಆಗ ನಾನು ಸುತ್ತೂರು ಮಠದ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಎಂದು ಉತ್ತರಿಸಿದೆ ಎಂದು ಹೇಳಿದರು.
Advertisement
ಫೆ.6ರಿಂದ ಫೆ.11ರವರೆಗೆ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಹಲವು ರೀತಿಯ ಚಟುವಟಿಕೆಗಳು ಮಾತ್ರವಲ್ಲದೇ ರೈತರಿಗೆ ಸಂಬಂಧಿಸಿದಂತೆ ಕೃಷಿಯೋತ್ಸವವೂ ಕೂಡಾ ನಡೆಯುತ್ತಿದೆ. ಒಟ್ಟು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮಾಜ ಸೇವೆಯನ್ನು ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಸ್ವಾಮೀಜಿಯವರು ಹಲವಾರು ರೀತಿಯ ಕೆಲಸವನ್ನು ಮಾಡಿದ್ದಾರೆ. 350ಕ್ಕಿಂತ ಹೆಚ್ಚು ಸಂಸ್ಥೆಗಳಿವೆ. 20,000ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲವೂ ಒಳ್ಳೆಯ ಕೆಲಸವೇ. ಆದರೆ ಇದೆಲ್ಲವನ್ನೂ ಹೊರತುಪಡಿಸಿ ಸ್ವಾಮೀಜಿಯವರು ಅಂಗವಿಕಲರಿಗಾಗಿ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿರುವುದು ದೇಶದ ಜನರಿಗೆ ಆದರ್ಶದ ಕೆಲಸವಾಗಿದೆ. ಇಡೀ ದೇಶದಿಂದ ಇಲ್ಲಿಗೆ ವಿದ್ಯಾರ್ಥಿಗಳು ಬಂದು ಇಲ್ಲಿ ಕಲಿತು ಅದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಆ ಪುಣ್ಯದ ಕೆಲಸವನ್ನು ಸ್ವಾಮೀಜಿಯವರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯಾಗಿದೆ. ಮೂರ್ತಿಯನ್ನು ನಿರ್ಮಿಸಿದ ಅರುಣ್ ಯೋಗಿರಾಜ್ ಅವರಿಗೂ ಇಲ್ಲಿ ಸನ್ಮಾನಿಸಲಾಗಿದೆ. ಇದರ ಜೊತೆಜೊತೆಗೆ ಸುತ್ತೂರು ಮಠದ ಶಾಖಾ ಮಠವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ಸ್ವಾಮೀಜಿಯವರು ತೀರ್ಮಾನಿಸಿದ್ದಾರೆ. ಈ ನಿರ್ಧಾರಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನರೇಂದ್ರ ಮೋದಿಯವರು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪುನಸ್ಥಾಪನೆ ಮಾಡಿರುವುದು ವಿಶ್ವದಲ್ಲಿಯೇ ಅದರ ಪ್ರತಿಷ್ಠೆಯನ್ನು ಜಾಸ್ತಿ ಮಾಡುವ ಕೆಲಸವನ್ನು ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ, ಉಜ್ಜಯಿನಿ, ಬದ್ರಿನಾಥ್ ಕಾರಿಡಾರ್ ಅಭಿವೃದ್ಧಿ ಆಗಿವೆ. ದೇಶದ ಆಯುರ್ವೇದ, ಯೋಗ, ಭಾಷೆ, ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.