– ಅಪರಾಧ ಮಟ್ಟ ಹಾಕಲು ಎಐ ಮೊರೆ ಹೋಗುತ್ತಿದ್ದಾರೆ ಪೊಲೀಸರು
ಯಾವುದೇ ಒಂದು ಕಳ್ಳತನ ಅಥವಾ ಅಪರಾಧ ವರದಿಯಾದಾಗ ಪೊಲೀಸರು (Police) ಎಚ್ಚೆತ್ತುಕೊಳ್ಳುವಲ್ಲಿ ಅಥವಾ ತನಿಖೆಯನ್ನು ಪ್ರಾರಂಭಿಸುವಲ್ಲಿ ಯಾವಾಗಲೂ ತಡವಹಿಸುತ್ತಾರೆ ಎಂಬ ಅಪಖ್ಯಾತಿ ಮೊದಲಿನಿಂದಲೂ ಇದೆ. ಆದರೆ ಪೊಲೀಸರಿಗೆ ತಕ್ಷಣವೇ ಅಪರಾಧಗಳ ಮಾಹಿತಿಗಳು ಬಂದು ತಡ ಮಾಡದೇ ತನಿಖೆಗೆ ಇಳಿಯಲು ಅಂತಹ ತಂತ್ರಜ್ಞಾನದ ಅವಶ್ಯಕತೆಯೂ ಇದೆ. ತಂತ್ರಜ್ಞಾನ ಲೋಕದಲ್ಲಿ ಸದ್ದು ಮಾಡುತ್ತಿರೋ ಕೃತಕ ಬುದ್ಧಿಮತ್ತೆ (Artificial Intelligence) ಪೊಲೀಸರಿಗೆ ಒಂದು ದೊಡ್ಡ ವರದಾನಗಿ ಸಂಚಲನ ಸೃಷ್ಠಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.
Advertisement
ಒಂದು ದೊಡ್ಡ ನಗರದಲ್ಲಿ ದಾರಿಹೋಕರೊಬ್ಬರ ಕಡೆಗೆ ಬೈಕ್ ಸವಾರರಿಬ್ಬರು ಬಂದು ಅವರ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹೋಗುತ್ತಾರೆ. ನಂತರ ಕಳ್ಳರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಆ ನಗರದ ಪೊಲೀಸರು ತಕ್ಷಣವೇ ಈ ಬಗ್ಗೆ ಮಾಹಿತಿ ಪಡೆದು ಏಕಕಾಲದಲ್ಲಿ ಫೀಲ್ಡಿಗಿಳಿದು ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಇದು ಯಾವುದೋ ಒಂದು ಸಿನಿಮಾದ ಕಥೆಯಂತೆ ಎನಿಸಿದರೂ ವಾಸ್ತವದಲ್ಲಿ ಇಂತಹ ಪ್ರಯತ್ನಗಳನ್ನು ಮಾಡುವಲ್ಲಿ ಪೊಲೀಸ್ ಇಲಾಖೆಗಳಲ್ಲಿ ಸತತ ಪ್ರಯತ್ನ ನಡೆಯುತ್ತಿದೆ.
Advertisement
ಹೌದು, ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿರುವ ವ್ಯಕ್ತಿಗಳು, ಅಥವಾ ಅಪರಾಧ ಶಂಕಿತ ವ್ಯಕ್ತಿಗಳ ಡೇಟಾವನ್ನು ಸಂಗ್ರಹಿಸಿ ಸಿಸ್ಟಮ್‌ಗಳಿಗೆ ಸೇರಿಸುವ ಪ್ರಯೋಗಗಳು ನಡೆಯುತ್ತಿದೆ. ಸರಗಳ್ಳತನ ಅಥವಾ ಮೊಬೈಲ್ ಕಳ್ಳತನದಂತಹ ಕೃತ್ಯಗಳನ್ನು ಎಐ (AI) ಮೂಲಕ ತಕ್ಷಣವೇ ಪತ್ತೆ ಹಚ್ಚಿ, ಕ್ಷಣಗಳಲ್ಲೇ ಕ್ರಮ ಕೈಗೊಳ್ಳುವಂತಹ ಪ್ರಯೋಗಗಳನ್ನು ನಡೆಸಲಾಗುತ್ತಿದೆ.
Advertisement
Advertisement
3 ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಇಲಾಖೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ್ದು, ಬಳಿಕ ದೆಹಲಿ ಪೊಲೀಸರು ಎಐ ಆಧಾರಿತ ಪರಿಹಾರಗಳನ್ನು ಹೆಚ್ಚಿನ ಪ್ರಕರಣಗಳಲ್ಲಿ ಅನುಸರಿಸುತ್ತಿದ್ದಾರೆ ಹಾಗೂ ಅನ್ವೇಶಿಸುತ್ತಿದ್ದಾರೆ. ‘ಸೇಫ್ ಸಿಟಿ’ ಪ್ರಾಜೆಕ್ಟ್, ಅಪರಾಧ ಮತ್ತು ಕ್ರಿಮಿನಲ್ ಟ್ರ‍್ಯಾಕಿಂಗ್ ಸಿಸ್ಟಮ್ ಏಕೀಕರಣ, ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಮತ್ತು ಆಫೀಸ್ ಆಟೊಮೇಷನ್‌ನಂತಹ ಕ್ರಮಗಳು ತಂತ್ರಜ್ಞಾನ ಹಾಗೂ ಎಐಗೆ ಸಂಬಂಧಿಸಿರುವ ಪ್ರಮುಖ ಉದಾಹರಣೆಗಳಾಗಿವೆ.
ಸೇಫ್ ಸಿಟಿ ಯೋಜನೆಯಡಿ 15 ಸಾವಿರ ಕ್ಯಾಮೆರಾಗಳನ್ನು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾಗಿವೆ. ಇವು ದೆಹಲಿ ಸರ್ಕಾರ ಸ್ಥಾಪಿಸಿರುವ ಕ್ಯಾಮೆರಾಗಳೊಂದಿಗೆ ಲಿಂಕ್ ಹೊಂದಿದೆ. ಈ ಕ್ಯಾಮೆರಾಗಳಲ್ಲಿ ಸಂಗ್ರಹವಾಗುವ ವಿಷಯಗಳನ್ನು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಹಾಗೂ ಎಐ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದು ಅಪರಾಧಗಳನ್ನು ನಿಗ್ರಹಿಸುವಲ್ಲಿ ಮೈಲಿಗಲ್ಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಲು ಹಾಗೂ ಅಪರಾಧ ಮತ್ತು ಕ್ರಿಮಿನಲ್ ಟ್ರ‍್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್‌ನಲ್ಲಿ (ಸಿಸಿಟಿಎನ್‌ಎಸ್) ಕೇಸ್ ಡೈರಿಗಳನ್ನು ಬರೆಯಲು ಹಿಂದಿ ಟೈಪಿಂಗ್‌ಗಾಗಿ ಎಐ ಆಧಾರಿತ ಕೀಬೋರ್ಡ್ ಅನ್ನು ಪರಿಚಯಿಸಿದ್ದರು. ಈ ಸಿಸ್ಟಂ ಪೊಲೀಸ್ ಕೆಲಸಗಳಲ್ಲಿ ಸಾಮಾನ್ಯವಾಗಿ ಬಳಸುವ ಹಿಂದಿ ಅಥವಾ ಉರ್ದು ಪದಗಳ ಸಮಗ್ರ ನಿಘಂಟು ಹೊಂದಿದೆ. ಇದು ದಾಖಲಾಗುವ ಹೊಸ ಪದಗಳನ್ನು ಕೂಡಾ ಡೇಟಾಬೇಸ್‌ನಲ್ಲಿ ಸಂಗ್ರಹಿಸಿಡುತ್ತದೆ. ಹೀಗೆ ಇದು ಸರಿಯಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡಿ ಪೊಲೀಸರಿಗೆ ವೇಗ, ನಿಖರತೆ ಹಾಗೂ ದಕ್ಷತೆಯನ್ನು ಸುಧಾರಿಸುವಂತೆ ಮಾಡುತ್ತದೆ.
ಅಪರಾಧಗಳನ್ನು ನಿಗ್ರಹಿಸಲು ಎಐ ಯಿಂದ ಹೇಗೆ ಸಾಧ್ಯ?
ಸರಗಳ್ಳತನದಂತಹ ಅಪರಾಧಗಳು ಹೆಚ್ಚಾಗಿ ನಡೆಯುವಂತಹ ಪ್ರದೇಶಗಳನ್ನು ಗುರುತಿಸಿ ಅದನ್ನು ಸಿಸ್ಟಂಗಳಿಗೆ ನೀಡಲಾಗುತ್ತದೆ. ಕಳ್ಳತನ ಇತ್ಯಾದಿ ಕ್ರಿಮಿನಲ್ ಹಿನ್ನೆಲೆಯುಳ್ಳವರ ಗುರುತಿನ ಡೇಟಾ ಹಾಗೂ ಆರೋಪಿ/ ಅಪರಾಧಿ ಜೈಲಿನಿಂದ ಬಿಡುಗಡೆಯಾದ ದಿನಾಂಕವನ್ನು ಕೂಡಾ ಸಂಯೋಜಿಸಲಾಗುತ್ತದೆ. ಅಪರಾಧಿಗಳ ಮುಖದ ಗುರುತುಗಳನ್ನು ಬಳಸಿಕೊಂಡು ಸಿಸಿಟಿವಿ ಫೂಟೇಜ್ ಮೂಲಕ ಆತನನ್ನು ಗುರುತಿಸಿ, ಆತನ ಚಲನ ವಲನದ ಬಗ್ಗೆ ಎಚ್ಚರಿಸುವಂತೆ ಮಾಡಬಹುದು.
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಂಭವನೀಯ ದರೋಡೆ ಅಥವಾ ದರೋಡೆ ನಡೆದಾಗ ತಕ್ಷಣವೇ ಅದನ್ನು ಸೂಚಿಸಲು ಎಲ್ಲಾ ಡೇಟಾಗಳನ್ನು ಎಐ ಪ್ರಕ್ರಿಯೆಗೊಳಿಸುತ್ತದೆ. ಇದು ಪೊಲೀಸರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು, ಗಸ್ತು ತಿರುಗುವುದನ್ನು ಹೆಚ್ಚಿಸಲು ಮಾತ್ರವಲ್ಲದೇ ಕಣ್ಗಾವಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎಐ ಪೊಲೀಸರಿಗೆ ದೊಡ್ಡ ಸವಾಲು ಎನಿಸಿದರೂ ಇದರ ಸಣ್ಣ ಪ್ರಮಾಣದ ಬಳಕೆ ದೊಡ್ಡ ಬದಲಾವಣೆಯನ್ನೇ ತಂದು ಕೊಡುವ ಸಾಧ್ಯತೆಯಿದೆ. ಎಐ ತಂತ್ರಜ್ಞಾನ ಪೊಲೀಸರ ಕಾರ್ಯಗಳಲ್ಲಿ ಅಪಾರವಾದ ಸಹಾಯ ಮಾಡುತ್ತದೆ. ಕಣ್ಗಾವಲು, ಭಯೋತ್ಪಾದನಾ ವಿರೋಧಿ ಕ್ರಮಗಳಿಗೂ ಇದು ಅನುಕೂಲವಾಗಿದೆ. ಮುಂಬರುವ ವರ್ಷಗಳಲ್ಲಿ ಪೊಲೀಸರು ಎಐ ಆಧಾರಿತ ಪರಿಹಾರಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಸುಲಭವಾಗಿ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
Web Stories