ಹಾಸನ: ಕಚೇರಿಯಲ್ಲೇ ಅಂಚೆ ಸಹಾಯಕಿಯ ಗಮನ ಬೇರೆಡೆ ಸೆಳೆದು ತಂಡವೊಂದು ಎರಡು ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆದ ಘಟನೆ ಹಾಸನದಲ್ಲಿ ನಡೆದಿದೆ.
ಈ ಘಟನೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಹಣ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಣ ಎಗರಿಸಿದ್ದು ಹೇಗೆ?
ಪಾಸ್ ಬುಕ್ ಎಂಟ್ರಿ ಮಾಡಿಸುವ ನೆಪದಲ್ಲಿ ಹಾಸನದ ಪ್ರಧಾನ ಅಂಚೆ ಕಚೇರಿಗೆ 10 ಜನರ ತಂಡವೊಂದು ಬಂದಿದೆ. ಕ್ಯಾಶ್ ಕೌಂಟರ್ ಬಳಿ ಮೂವರು ಬಂದಿದ್ದಾರೆ. ಇನ್ನುಳಿದವರು ಕೌಂಟರ್ ಮುಂಭಾಗ ಮಾತನಾಡುತ್ತಾ ನಿಂತಿದ್ದರು. ಮಾತಿನ ನಡುವೆ ಕ್ಯಾಶ್ ಕೌಂಟರ್ ನಲ್ಲಿದ್ದ ಅಂಚೆ ಸಹಾಯಕಿ ಕಾಂಚನಾ ಅವರ ಗಮನ ಬೇರೆಡೆ ಸೆಳೆದು, ಅವರ ಡ್ರಾಯರ್ ನಿಂದ ನಗದು ಎಗರಿಸಿ ಖದೀಮರು ಪರಾರಿಯಾಗಿದ್ದಾರೆ.
ಶನಿವಾರ ಹೆಚ್ಚಿನ ಜನಸಂದಣಿಯ ಲಾಭ ಪಡೆದು ಕಳ್ಳರು ನಗದು ಎಗರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.