ಚಿಕ್ಕಬಳ್ಳಾಪುರ: ಖಾಸಗಿ ಶಾಲೆಯ ಶಿಕ್ಷಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪುಂಡರು ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಳಿ ನಡೆದಿದೆ.
ಭಾನುವಾರ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಆಚರಣೆಗೆ ತೆರಳುತ್ತಿದ್ದ ಶಿಕ್ಷಕರು ಬೈಕ್‍ನಲ್ಲಿ ಪೆಟ್ರೋಲ್ ಖಾಲಿಯಾದ ಹಿನ್ನೆಲೆ ಬೂದಿಗೆರೆ ಗ್ರಾಮದ ಬಳಿ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು. ಇದೇ ವೇಳೆ ಬಂಕ್ ಬಳಿ ಬಂದ ಮೂವರು ಪುಂಡರು ಶಿಕ್ಷಕರ ಬಳಿ ವಿನಾಕಾರಣ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ತದನಂತರ ಅವರನ್ನ ಬೈಕ್‍ನಲ್ಲಿ ಹಿಂಬಾಲಿಸಿ ಅರ್ಧ ದಾರಿಯಲ್ಲಿ ಅಡ್ಡಗಟ್ಟಿ ಅವರ ಬಳಿಯಿದ್ದ ನಗದು ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ.
ಗಂಗವಾರ ಗ್ರಾಮದ ಸನ್‍ರೈಸ್ ಶಾಲೆಯಲ್ಲಿ ಶಿಕ್ಷಕರಾಗಿರುವ ಪ್ರಶಾಂತ್ ಹಾಗೂ ಸುದರ್ಶನ್ ಹಲ್ಲೆಗೊಳಗಾಗಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಹಲ್ಲೆಗೊಳಗಾಗಿ ಶಿಕ್ಷಕರು ಸುಮ್ಮನಾಗಿ ಹೊರಟು ಹೋಗಿದ್ದಾರೆ. ಆದರೆ ಅವರನ್ನು ಮೂವರು ಪುಂಡರು ಹಿಂಬಾಲಿಸಿ ಅರ್ಧದಾರಿಯಲ್ಲಿ ಅವರ ಬೈಕ್ ಅಡ್ಡಗಟ್ಟಿ ಶಿಕ್ಷಕರ ಬಳಿ ಇದ್ದ ವಸ್ತುಗಳನ್ನ ಕಿತ್ತುಕೊಂಡಿದ್ದಾರೆ. ಅಲ್ಲದೆ ಕಿರುಚಾಡಿ ಬೇರೆಯವರನ್ನ ಕರೆಯಲು ಯತ್ನಿಸಿದ ಸುದರ್ಶನ್ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಶಿಕ್ಷಕರಿಬ್ಬರು ಶಾಲೆಗೆ ಬಾರದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಯಾವಾಗ ಶಿಕ್ಷಕರಿಬ್ಬರು ಶಾಲೆಗೆ ಬರಲಿಲ್ಲವೋ ಆಗ ಅನುಮಾನಗೊಂಡ ಸನ್‍ರೈಸ್ ಶಾಲೆಯ ಆಡಳಿತ ಮಂಡಳಿ ಶಿಕ್ಷಕರನ್ನ ವಿಚಾರಿಸಿದಾಗ ಪುಂಡರು ನಡೆಸಿದ್ದ ಕೃತ್ಯ ಬೆಳಕಿಗೆ ಬಂದಿದೆ. ಪುಂಡರು ಹಲ್ಲೆ ಮಾಡಿದ ಕೆಲ ದೃಶ್ಯಗಳು ಬೂದಿಗೆರೆ ಹೆಚ್‍ಪಿ ಪೆಟ್ರೋಲ್ ಬಂಕ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಇಟ್ಟುಕೊಂಡು ಚನ್ನರಾಯಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು.
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನರಾಯಪಟ್ಟಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಸುಬ್ರಮಣಿ ಹಾಗೂ ಆಲಿ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.