ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಹೈಟೆಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸೂಟು ಬೂಟು ಧರಿಸಿಕೊಂಡು ಬಂದು ದುಬಾರಿ ಬೆಲೆಯ ವಾಚ್‍ಗಳನ್ನ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಬಂದು ರಾಡೋ ವಾಚುಗಳನ್ನ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಹುಬ್ಬಳ್ಳಿಯ ವೇಮರೆಡ್ಡಿ ಪಾಟೀಲ್ ಅವರ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಬರೋಬ್ಬರಿ 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್ ಅನ್ನು ಖದೀಮರು ಎಗರಿಸಿದ್ದಾರೆ.
Advertisement
Advertisement
ಜನವರಿ 7 ರಂದು ರಾತ್ರಿ ಅಂಗಡಿಗೆ ಬಂದಿದ್ದ ಮಹಿಳೆ ಹಾಗೂ ಮೂವರು ಪುರುಷರ ಪೈಕಿ ಒಬ್ಬ ವ್ಯಕ್ತಿ `ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, `ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೊಬ್ಬ ಟೈಮೆಕ್ಸ್ ಕೌಂಟರ್ ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಏನೇನೊ ವಿಚಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ವಾಚ್ ಪ್ಯಾಕ್ ಚೆಕ್ ಮಾಡಿದಾಗ ಕಳವಾದ ವಿಷಯ ಗೊತ್ತಾಗಿದೆ.
Advertisement
Advertisement
ಸಿಸಿಟಿವಿಯಲ್ಲಿ ಸೆರೆ:
ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್‍ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಕಳ್ಳರ ಗ್ಯಾಂಗ್ ಮಾಲ್‍ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆಯಲ್ಲಿ ಓಡಾಡಿ ಮಾಲ್‍ನಿಂದ ಹೊರಹೋಗಿರುವ ದೃಶ್ಯಗಳೂ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಉದ್ಯಮಿಗಳ ವೇಷದಲ್ಲಿ ಮಾಲ್‍ಗೆ ಬಂದು ಕಳ್ಳತನ ಮಾಡಿರುವುದು ಅಂಗಡಿಗಳ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಅಂಗಡಿಯವರು ಪ್ರಾಮಾಣಿಕ ಗ್ರಾಹಕರನ್ನೂ ಅನುಮಾನದಿಂದ ನೋಡುವಂತಾಗಿದೆ. ಘಟನೆಯ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೈ ಪ್ರೊಫೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.