– ಕಲಬುರಗಿಯ ದಾಲ್ ಮಿಲ್‍ನಲ್ಲಿ ಕಳ್ಳರ ಕಾಟ
ತುಮಕೂರು/ಕಲಬುರಗಿ: ಕುದುರೆ ಗಾಡಿಯಲ್ಲಿ ಬಂದ ನಾಲ್ಕು ಜನ ಕಳ್ಳರ ಗುಂಪು ತುಮಕೂರಿನ ಬಾರ್ ವೊಂದರ ಬೀಗ ಮುರಿದು ಕಳ್ಳತನ ಮಾಡಿದೆ. ತುಮಕೂರಿನ ಹನುಮಂತಪುರದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಕಿಂಗ್ಸ್ ಕಾಟೇಜ್ ಬಾರ್ ನಲ್ಲಿ ಕಳ್ಳತನ ನಡೆದಿದೆ.
ಅಂಗಡಿಯಲ್ಲಿ ದುಬಾರಿ ಬೆಲೆಯ ಡ್ರಿಂಕ್ಸ್, ಟಿವಿ, ಡಿವಿಡಿ, ಜೊತೆಗೆ 30 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕಳ್ಳರು ಕುದುರೆ ಗಾಡಿಯಲ್ಲಿ ಬಂದು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಕಲಬುರಗಿ ದಾಲ್ ಮಿಲ್ ಮಾಲೀಕರು ಕಳೆದ ಕೆಲ ವರ್ಷಗಳಿಂದ ಕಳ್ಳರ ಹಾವಳಿಯಿಂದ ಕಂಗೆಟ್ಟಿದ್ದಾರೆ. ಇದೀಗ ಮತ್ತೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಕಪನೂರ ಇಂಡಸ್ಟ್ರೀಸ್‍ನ ಸಂಗಾಪುರಿ ಪಲ್ಸಸ್, ಲಕ್ಷ್ಮೀ ದಾಲ್ ಮಿಲ್ ಸೇರಿದಂತೆ ಒಟ್ಟು 4 ದಾಲ್ ಮಿಲ್‍ಗಳಲ್ಲಿ ಇದೀಗ ಮತ್ತೆ ಕಳ್ಳತನವಾಗಿವೆ. ಏಪ್ರಿಲ್ 4 ಮತ್ತು ಏಪ್ರಿಲ್ 6ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಕಳೆದ ಎರಡು ವರ್ಷದಿಂದ ನಿರಂತರ ಕಳ್ಳತನ ನಡೆಯುತ್ತಿರುವ ಕಾರಣ ಔಟ್ ಪೊಲೀಸ್ ಚೆಕ್ ಪೋಸ್ಟ್ ಮಾಡಲಾಗಿದೆ. ಆದರೆ ಕಳ್ಳರ ಹಾವಳಿ ಮಾತ್ರ ನಿರಂತರವಾಗಿ ನಡೆಯುತ್ತಿರುವ ಕಾರಣ ದಾಲ್ ಮಿಲ್ ಮಾಲೀಕರ ನಿದ್ದೆಗೆಡಿಸಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.