ಮಂಡ್ಯ: ಕಳ್ಳರ ತಂಡವೊಂದು ನಿಧಿಗಾಗಿ ಪುರಾತನ ದೇವಸ್ಥಾನದ ಬಳಿ ವಾಮಾಚಾರ ಮಾಡಿಸಿದ್ದು, ದೇವರ ವಿಗ್ರಹವಿದ್ದ ಜಾಗದಲ್ಲಿ ಎಂಟು ಅಡಿ ಸುರಂಗ ತೆಗೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕಳ್ಳರು ನಿಧಿಗಾಗಿ ಸುರಂಗ ತೆಗೆದಿದ್ದಾರೆ. ಮೊದಲು ಶಿವನ ವಿಗ್ರಹದ ಸುತ್ತ ವಾಮಾಚಾರ ಮಾಡಿ ನಂತರ ವಿಗ್ರಹವನ್ನ ಪಕ್ಕಕ್ಕೆ ಸರಿಸಿದ್ದಾರೆ. ಬಳಿಕ ವಿಗ್ರಹವಿದ್ದ ಜಾಗದಲ್ಲಿ ಸುಮಾರು ಎಂಟು ಅಡಿಯಷ್ಟು ಸುರಂಗ ತೆಗೆದಿದ್ದಾರೆ.
ಕಳ್ಳರು ಸುರಂಗ ತೆಗೆದರೂ ಏನು ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ಜಾಗದಲ್ಲಿ ನಿಧಿ ಇರುವುದಾಗಿ ಗ್ರಾಮದಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಈ ಹಿಂದೆಯೂ ನಿಧಿಗಾಗಿ ಶೋಧ ಕಾರ್ಯ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಯಾರೋ ಮಾಹಿತಿ ತಿಳಿದಿರುವ ವ್ಯಕ್ತಿಗಳೇ ಈ ಕೃತ್ಯ ಮಾಡಿರಬಹುದು ಅಂತಾ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದು, ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.