ದಾವಣಗೆರೆ: ಕಳ್ಳರ ಕಾಟದಿಂದ ಜಿಲ್ಲೆಯಲ್ಲಿ ಲಾರಿ ಮಾಲೀಕರು ತಮ್ಮ ಲಾರಿಗಳನ್ನು ಮಾರಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.
ಬೆಳಗಾಗುವುದರೊಳಗೆ ಡೀಸೆಲ್, ಬ್ಯಾಟರಿ, ಟೈಯರ್ ಗಳು ಕಳ್ಳತನವಾಗುತ್ತಿದ್ದು, ಲಾರಿ ಮಾಲೀಕರ ನಿದ್ದೆಗೆಡಿಸಿದೆ. ನಗರದಲ್ಲಿ ಎಲ್ಲಿಯೂ ಲಾರಿ ಸ್ಟ್ಯಾಂಡ್ ಇಲ್ಲ. ಮಾಲೀಕರೇ ನಗರದ ಪುಪ್ಪಾಂಜಲಿ ಚಿತ್ರಮಂದಿರ ಬಳಿಯ ಬಿಲಾಲ್ ಕಾಂಪೌಂಡ್ ಹಿಂಭಾಗದ ಲೋಕಲ್ ಗೂಡ್ ಶೆಡ್‍ನಲ್ಲಿ ಲಾರಿ ನಿಲ್ದಾಣ ಮಾಡಿಕೊಂಡಿದ್ದಾರೆ.
Advertisement
Advertisement
ಪ್ರತಿನಿತ್ಯ ಈ ಜಾಗದಲ್ಲಿ 150ಕ್ಕೂ ಹೆಚ್ಚು ಲಾರಿಗಳು ನಿಲ್ಲುತ್ತವೆ. ಬೆಳಗ್ಗೆ ಜನದಟ್ಟಣೆಯಿಂದ ಕೂಡಿದ ಈ ಪ್ರದೇಶ ರಾತ್ರಿಯಾಗುತ್ತಿದ್ದಂತೆ ನಿರ್ಜನವಾಗಿ ಬಿಡುತ್ತದೆ. ಇಲ್ಲಿ ಕಳವು ಮಾಡುವವರು ಎಷ್ಟು ನಿಸ್ಸೀಮರೆಂದರೆ ಕಬ್ಬಿಣದ ದೊಡ್ಡ ದೊಡ್ಡ ಬೀಗಗಳನ್ನೇ ತುಂಡು ಮಾಡಿ, ಕೆಲವೇ ನಿಮಿಷಗಳಲ್ಲಿ ಡೀಸೆಲ್ ಟ್ಯಾಂಕ್ ಖಾಲಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಬೆಲೆ ಬಾಳುವ ಬ್ಯಾಟರಿ, ಟೂಲ್ಕಿಟ್, ತಾಡಪಲ್ ಯಾವುದನ್ನೂ ಬಿಡುತ್ತಿಲ್ಲ.
Advertisement
ಕಳೆದ ಹತ್ತು ದಿನಗಳಿಂದ ಕಳವು ಪ್ರಕರಣಗಳ ಸಂಖ್ಯೆ ಏರಿಕೆ ಆಗಿರುವುದು ಲಾರಿ ಮಾಲೀಕರ ನಿದ್ದೆಗೆಡಿಸಿದೆ. ಇಂಧನ ದರ ದುಬಾರಿ ಹೊತ್ತಲ್ಲಿ ದಿನವೂ ಒಂದಿಲ್ಲೊಂದು ಲಾರಿಯಲ್ಲಿ ಡೀಸೆಲ್ ಕಳ್ಳತನವಾಗುತ್ತಿದ್ದು, ಯಾವಾಗಲೂ ಟ್ಯಾಂಕ್ ಫುಲ್ ಮಾಡಿಸುತ್ತಿದ್ದ ಲಾರಿ ಮಾಲೀಕರು ಕಳವು ಪ್ರಕರಣ ಹೆಚ್ಚಿದ ಬಳಿಕ ಟ್ಯಾಂಕ್‍ನಲ್ಲಿ 15-20 ಲೀಟರ್ ಮಾತ್ರ ಹಾಕಿಸುತ್ತಿದ್ದು, ಅದನ್ನು ಕೂಡ ಕಳ್ಳರು ಬಿಡುತ್ತಿಲ್ಲ ಅಂತ ಮಾಲೀಕರು ಆರೋಪಿಸುತ್ತಿದ್ದಾರೆ.
Advertisement
2013ರಲ್ಲಿ ಈ ಪ್ರದೇಶದಲ್ಲಿ ಎರಡು ಲಾರಿಗಳು ನಾಪತ್ತೆಯಾಗಿದ್ದು, ಅದರಲ್ಲೊಂದು ಪತ್ತೆಯಾದರೆ ಇನ್ನೊಂದರ ಸುಳಿವು ಇದುವರೆಗೂ ಸಿಕ್ಕಿಲ್ಲ. ಈಗಿರುವ ತಾತ್ಕಾಲಿಕ ನಿಲ್ದಾಣಕ್ಕೆ ಕಾಂಪೌಂಡ್ ಕಟ್ಟುವ ಜತೆಗೆ ಪೊಲೀಸ್ ಬೀಟ್ ಹೆಚ್ಚಿಸಬೇಕು ಎನ್ನುತ್ತಿದ್ದಾರೆ. ಲಾರಿ ಪಾರ್ಕಿಂಗ್‍ಗಾಗಿ ಕಳೆದ 15 ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು, ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಮಾಲೀಕರು ತಮ್ಮ ಅಳಲುತೋಡಿಕೊಂಡಿದ್ದಾರೆ.