ವಿಜಯಪುರ: ಕಳ್ಳನೊಬ್ಬ ಬೇಕರಿ ಕಳ್ಳತನಕ್ಕೆ ಮುಂದಾಗಿ, ಕ್ಯಾಶ್ ಕೌಂಟರ್ ನಲ್ಲಿ 3 ಸಾವಿರ ಹಣವನ್ನೇನೋ ದೋಚಿದ. ಆದ್ರೆ ತಾನು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿಯಲ್ಲಿ ರಿಕಾರ್ಡ್ ಆಗಿದ್ದು ಗೊತ್ತಾಗಿತ್ತು. ಹೀಗಾಗಿ ತಾನು ಕಳ್ಳತನ ಮಾಡಿದ್ದು ಗೊತ್ತಾಗಬಾರದೆಂದು ಆತ ಕಂಡುಕೊಂಡಿದ್ದ ಉಪಾಯ ಮಾತ್ರ ಭಾರಿ ಅನಾಹುತವನ್ನೇ ಸೃಷ್ಟಿಸಿಬಡಬಹುದಿತ್ತು.
ನಗರದ ಬಸವೇಶ್ವರ ವೃತ್ತದಲ್ಲಿರುವ ಕೇಕ್ ವಾಲಾ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಖದೀಮ ತನ್ನ ಮುಖ ಸಿಸಿಟಿವಿಯಲ್ಲಿ ಬರಬಾರದೆಂಬ ಉದ್ದೇಶದಿಂದ ಬೇಕರಿಯಲ್ಲಿದ್ದ ಸಿಲಿಂಡರ್ ವಾಲ್ ತೆಗೆದು ಇಡೀ ಕಟ್ಟಡವನ್ನೇ ಧ್ವಂಸ ಮಾಡಲು ಮುಂದಾಗಿದ್ದ. ಆದ್ರೆ ಅದೃಷ್ಟವಷಾತ್ ಬೆಳಗ್ಗೆ ಬೇಕರಿಗೆ ಬಂದ ಮಾಲೀಕರು ಗ್ಯಾಸ್ ವಾಸನೆ ಗಮನಿಸಿ ತಕ್ಷಣ ಸಿಲಿಂಡರ್ ಕಂಪನಿಯವರನ್ನು ಕರೆಸಿ ತಪಾಸಣೆ ನಡೆಸಿದ್ದಾರೆ. ನಂತರ ಎಲ್ಲಾ ಸಿಲಿಂಡರ್‍ಗಳನ್ನು ಹೊರಹಾಕಿದ್ದಾರೆ.
ಬಳಿಕ ಸಿಸಿಟಿವಿ ಚೆಕ್ ಮಾಡಿದಾಗಲೇ ಗೊತ್ತಾಗಿದ್ದು ಖದೀಮನ ಕೃತ್ಯದ ಅಸಲಿ ಕಹಾನಿ. ಸದ್ಯ ಕೇಕ್ ವಾಲಾ ಮಾಲೀಕರು ಗಾಂಧಿಚೌಕ ಠಾಣೆಯಲ್ಲಿ ದೂರನ್ನು ನೀಡಿದ್ದು ಖದೀಮನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಒಂದು ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರೆ ಈ ಕಟ್ಟಡದಲ್ಲಿ ಮಲಗುತ್ತಿದ್ದ 20 ಕ್ಕೂ ಹೆಚ್ಚು ಜನರು ಸಾವು ನೋವು ಅನುಭವಿಸುತ್ತಿದ್ದರು. ದೇವರು ದೊಡ್ಡವನು ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ಬೇಕರಿ ಮಾಲೀಕರು ನಿಟ್ಟುಸಿರುಬಿಟ್ಟಿದ್ದಾರೆ.