ಗದಗ: ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.
ರೈತ ಗುರುಬಸಯ್ಯ ಪ್ರಭುಸ್ವಾಮಿ ಮಠ ಎಂಬವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಸುಮಾರು 34 ರಿಂದ 40 ಮೂಟೆಯಷ್ಟು ಈರುಳ್ಳಿ ಬೆಳೆಯನ್ನು ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ. ರೈತನ ಕಣ್ಣಲ್ಲಿ ಈರುಳ್ಳಿ ಕಣ್ಣೀರು ತರಿಸಿದೆ.
Advertisement
Advertisement
ಗುರುಬಸಯ್ಯ ಅವರು 1.5 ಎಕರೆ ನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಇನ್ನು ಎರಡು ದಿನದಲ್ಲಿ ಫಸಲು ಕಟಾವು ಮಾಡಬೇಕು ಎಂದು ರೈತ ಎಂದುಕೊಂಡಿದ್ದರು. ಆದರೆ ಫಸಲು ಕೈಗೆ ಬರುವ ಮುನ್ನವೇ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಈರುಳ್ಳಿ ಜೊತೆ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಸಹ ಕಳ್ಳತನವಾಗಿದೆ.
Advertisement
Advertisement
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.
ಪ್ರವಾಹದಿಂದಾಗಿ ಈರುಳ್ಳಿ ಫಸಲು ಇಳಿಮುಖವಾಗಿದ್ದು, ಬೆಲೆ ಹೆಚ್ಚಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 3 ಸಾವಿರ ಟನ್‍ಗೂ ಹೆಚ್ಚು ಈರುಳ್ಳಿ ಅಗತ್ಯ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹೀಗಾಗಿಯೇ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹಾಪ್ ಕಾಮ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲಗೌಡ ಹೇಳುತ್ತಾರೆ.