ಚೆನ್ನೈ: ಸಾಮಾನ್ಯವಾಗಿ ಒಮ್ಮೆ ಜೈಲಿಗೆ ಹೋಗಿ ಶಿಕ್ಷೆಗೆ ಒಳಪಟ್ಟು ಬಂದ ಮೇಲೆ ಮತ್ತೆ ಆರೋಪಿ ಅಪರಾಧ ಮಾಡಲು ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜೈಲಿಗೆ ಹೋಗಬೇಕೆಂದು ಬೈಕ್ ಕದ್ದಿದ್ದಾನೆ.
ಚೆನ್ನೈನ ಜ್ಞಾನಪ್ರಕಾಶಂ ಎಂಬಾತ ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಮುಖ ಕಾಣುವಂತೆ ಬೈಕ್ ಕದ್ದಿದ್ದಾನೆ. ಈ ಮೂಲಕ ಮತ್ತೆ ಜೈಲುವಾಸ ಅನುಭವಿಸಲು ರೆಡಿಯಾಗಿದ್ದಾನೆ.
Advertisement
Advertisement
ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದನು. ಜೈಲಿನಲ್ಲಿ ಸಿಗುತ್ತಿದ್ದ ಊಟ, ಸ್ನೇಹಿತರು, ಆರಾಮದಾಯಕ ಜೀವನವನ್ನು ಮತ್ತೆ ಅನುಭವಿಸಬೇಕೆಂದು ಕೈಲಾಸಪುರಂನ ರಸ್ತೆಯಲ್ಲಿದ್ದ ಬೈಕೊಂದನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆರೋಪಿ ಸಿಸಿಟಿವಿ ಕ್ಯಾಮೆರಾದಲ್ಲಿ ತನ್ನ ಮುಖ ಸರಿಯಾಗಿ ಕಾಣುವಂತೆ ಬೈಕ್ ಕದ್ದಿದ್ದನು.
Advertisement
ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ ಜೈಲು ಜೀವನವನ್ನು ಎಂಜಾಯ್ ಮಾಡಲು ಬೈಕ್ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಜೈಲಿನಲ್ಲಿ ಇದ್ದರೆ ಸರಿಯಾದ ಸಮಯಕ್ಕೆ ಊಟ-ತಿಂಡಿ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಸೋಮಾರಿ ಎಂದು ಬೈಯುವ ರೀತಿ ಜೈಲಿನಲ್ಲಿ ಯಾರೂ ಬೈಯುವುದಿಲ್ಲ. ಸಮಯ ಕಳೆಯಲು ತನ್ನ ಹಳೆಯ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ಮಾತನಾಡಿಕೊಂಡು ಎಂಜಾಯ್ ಮಾಡಬಹುದು. ಅದಕ್ಕಾಗಿ ಬೈಕ್ ಕಳ್ಳತನ ಮಾಡಿದೆ ಎಂದು ಜ್ಞಾನಪ್ರಕಾಶಂ ಹೇಳಿದ್ದಾನೆ ಎಂದು ಎಸಿಪಿ ಪಿ.ಅಶೋಕನ್ ಹೇಳಿದರು.
ಆರೋಪಿ ಜ್ಞಾನಪ್ರಕಾಶಂ ಪೆರುಂಗಲತ್ತೂರು ನಿವಾಸಿಯಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದನು. ಈ ಪ್ರಕರಣದಲ್ಲಿ ಆತ ಮೂರು ತಿಂಗಳು ವಿಚಾರಣಾಧೀನ ಕೈದಿಯಾಗಿ ಪುಝಲ್ ಜೈಲಿನಲಿದ್ದನು. ನಂತರ ಜೂನ್ 29ರಂದು ಬಿಡುಗಡೆಯಾಗಿದ್ದನು. ಆದರೆ ಈತ ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಈತನ ಪತ್ನಿ ಮತ್ತು ಮಕ್ಕಳು ಪ್ರತಿದಿನ ನಿಂದಿಸುತ್ತಿದ್ದರು.
ಹೀಗಾಗಿ ಮನೆಯಲ್ಲಿ ನಿಂದಿಸುತ್ತಾರೆ ಎಂದು ಮತ್ತೆ ಜೈಲಿಗೆ ಹೋಗಿ ಆರಾಮದಾಯಕ ಜೀವನ ನಡೆಸಬಹುದೆಂದು ಬೈಕ್ ಕದ್ದು ನಗರದಲ್ಲೆಲ್ಲಾ ಸುತ್ತಾಡಿದ್ದಾನೆ. ಜೊತೆಗೆ ತಂಬರಂನಲ್ಲಿ ಮತ್ತೊಂದು ಬೈಕ್‍ನಿಂದ ಪೆಟ್ರೋಲ್ ಕದ್ದಿದ್ದಾನೆ. ಆಗ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಕೂಡ ಬೈಕ್ ಕದ್ದು ತಂದಿದ್ದು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.