ನವದೆಹಲಿ: ಐತಿಹಾಸಿಕ ಕೆಂಪು ಕೋಟೆ (Red Fort) ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶವನ್ನು (Golden Kalash) ಕಳ್ಳತನ ಮಾಡಿದ ಆರೋಪಿಯನ್ನು ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು (Crime Branch) ಬಂಧಿಸಿದ್ದಾರೆ.
ಆರೋಪಿಯನ್ನು ಹಾಪುರ್ ನಿವಾಸಿ ಭೂಷಣ್ ವರ್ಮಾ ಎಂದು ಗುರುತಿಸಲಾಗಿದೆ. ಆರೋಪಿಯು ಜೈನ್ ಧರ್ಮದ ಧಾರ್ಮಿಕ ಕಾರ್ಯಕ್ರಮದಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶವನ್ನು ಕಳವು ಮಾಡಿದ್ದ. ಇದನ್ನೂ ಓದಿ: Viral Video | ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶ ಕಳವು
ಜೈನ ಅರ್ಚಕನ (Jain Priest) ವೇಷದಲ್ಲಿ ಬಂದ ಆರೋಪಿ ಬೆಲೆಬಾಳುವ ವಸ್ತುಗಳನ್ನ ದೋಚಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ಬಿಎನ್‌ಎಸ್ ಸೆಕ್ಷನ್ 303 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಕೆಂಪುಕೋಟೆ ಆವರಣದಲ್ಲಿರುವ ಪಾರ್ಕ್ನಲ್ಲಿ `ದಶಲಕ್ಷಣ ಮಹಾಪರ್ವ’ ಹೆಸರಿನಲ್ಲಿ ಆ.15ರಿಂದ ಸೆ.9ರ ವರೆಗೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜೈನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಶೇಷ ಅತಿಥಿಯಾಗಿದ್ದರು. ಈ ಸಂದರ್ಭ ಕಳ್ಳತನ ನಡೆದಿದೆ. ಜೈನ ಅರ್ಚಕನ ವೇಷದಲ್ಲಿ ಬಂದ ಆರೋಪಿ ಬೆಲೆ ಬಾಳುವ ವಸ್ತುಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದ. ಆಯೋಜಕರು ಗಣ್ಯರನ್ನು ಸ್ವಾಗತಿಸುವ ಭರದಲ್ಲಿದ್ದಾಗ ಆರೋಪಿ ವಸ್ತುಗಳನ್ನ ದೋಚಿದ್ದ.