– ಇತರ ರೇಪ್ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ
– ನನ್ನ ಪತಿಯನ್ನು ಕೊಂದ ಜಾಗದಲ್ಲಿ ನನ್ನನ್ನು ಕೊಲ್ಲಿ: ಪತ್ನಿ ಕಣ್ಣೀರು
ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಈ ನಡುವೆ ಆರೋಪಿಗಳ ಕುಟುಂಬಸ್ಥರು ಎನ್‍ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆರೋಪಿಗಳಾದ ಮೊಹಮ್ಮದ್ ಪಾಷಾ, ನವೀನ್, ಚೆನ್ನಕೇಶವುಲು ಹಾಗೂ ಶಿವಾ ನನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶ ಶ್ಲಾಘಿಸುತ್ತಿದೆ. ಅಲ್ಲದೆ ಹೈದರಾಬಾದ್ ವಿದ್ಯಾರ್ಥಿಗಳು ಪೊಲೀಸರಿಗೆ ಜೈಕಾರ ಹಾಕುತ್ತಿದ್ದಾರೆ. ಜೊತೆಗೆ ರಾಖಿ ಕಟ್ಟುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ಮೊಹಮ್ಮದ್ ಪಾಷಾನ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪೊಲೀಸರು ನನ್ನ ಮಗನಿಗೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಮಗ ಈಗ ಇಲ್ಲ. ಖಂಡಿತಾ ಇದು ತಪ್ಪು. ಆದರೆ ಏನೂ ಮಾಡಲಿ ನನ್ನ ಮಗ ಈಗ ಬದುಕಿಲ್ಲ. ನನಗೆ ಮಾತನಾಡಲು ಸಹ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಆರೋಪಿ ಶಿವಾ ತಾಯಿ ಮಾತನಾಡಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನನ್ನು ಶೂಟ್ ಮಾಡಿ ಎಂದು ಕಣ್ಣೀರು ಹಾಕುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಶಿವಾ ತಂದೆ, ಕೇವಲ ನಾಲ್ವರು ಆರೋಪಿಗಳಿಗೆ ಮಾತ್ರ ಏಕೆ ಈ ಶಿಕ್ಷೆ? ಬೇರೆಯವರಿಗೂ ಇದೇ ಶಿಕ್ಷೆ ನೀಡಬೇಕು. ಅವರಿಗೇಕೆ ಈ ಶಿಕ್ಷೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು
ನನ್ನ ಮಗ ಹಾಗೂ ಉಳಿದ ಆರೋಪಿಗಳಿಗೆ ಜೈಲಿಗೆ ಹಾಕುವ ಬದಲು ಕೊಂದು ಬಿಡಿ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು ಎಂದು ಆರೋಪಿ ನವೀನ್ ತಂದೆ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಚೆನ್ನಕೇಶವುಲು ತಾಯಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನಿಗೆ ಶಿಕ್ಷೆ ನೀಡಿ. ನನ್ನ ಮಗ ಅಪರಾಧ ಮಾಡಿದ್ದಾನೆಂದರೆ ಆತನನ್ನು ಸುಟ್ಟು ಕೊಲೆ ಮಾಡಿ. ನನ್ನ ಮಗ ನನಗೆ ಏನೂ ಅಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಸಂತ್ರಸ್ತೆಯ ತಾಯಿ 9 ತಿಂಗಳ ನಂತರ ತನ್ನ ಮಗಳಿಗೆ ಜನ್ಮ ನೀಡಿದ್ದರು. ಆದರೆ ಅವರ ಮಗಳು ಇಂತಹ ಅಪರಾಧಕ್ಕೆ ಬಲಿಯಾಗಿದ್ದಾಳೆ. ಅವರು ಎಷ್ಟು ಕಷ್ಟಪಟ್ಟಿರಬಹುದು ಎಂದು ಹೇಳಿದ್ದರು. ಇದನ್ನು ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ
ಚೆನ್ನಕೇಶವುಲು ಪತ್ನಿ ಪ್ರತಿಕ್ರಿಯೆ ನೀಡಿ, ಮದುವೆಯಾದ ಒಂದು ವರ್ಷದೊಳಗೆ ನನ್ನ ಪತಿ ನನ್ನನ್ನು ಬಿಟ್ಟು ಹೋಗಿದ್ದಾರೆ. ದಯವಿಟ್ಟು ನನಗೆ ಎನ್‍ಕೌಂಟರ್ ಆದ ಜಾಗಕ್ಕೆ ಕರೆದುಕೊಂಡು ಹೋಗಿ. ನಾನು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಥವಾ ನೀವೇ ನನ್ನನ್ನು ಕೊಲೆ ಮಾಡಿ. ನನ್ನ ಪತಿ ಇಲ್ಲದೆ ನನಗೆ ಬದುಕಲು ಆಗುವುದಿಲ್ಲ ಎಂದು ಕಣ್ಣೀರು ಹಾಕುವ ಮೂಲಕ ತನ್ನ ನೋವನ್ನು ಹೊರಹಾಕಿದ್ದಾಳೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ
ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆಗೈದಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ.