ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್‌

Public TV
2 Min Read
donald trump 2

 ವಾಷಿಂಗ್ಟನ್‌: ಭಾರತ (India) ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ಅವರಿಗೆ ದುಡ್ಡು ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರಶ್ನಿಸಿದ್ದಾರೆ.

ಫ್ಲೋರಿಡಾದಲ್ಲಿರುವ ತನ್ನ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ. ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ.

ನನಗೆ ಭಾರತ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಗೌರವವಿದೆ. ಆದರೆ ಮತದಾರರ ಮತದಾನಕ್ಕಾಗಿ (Voter Turnout) 21 ಮಿಲಿಯನ್ ಡಾಲರ್‌ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.


ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ 182 ಕೋಟಿ (21 ಮಿಲಿಯನ್‌ ಡಾಲರ್‌) ಅನುದಾನವನ್ನು ಟ್ರಂಪ್‌ ಸರ್ಕಾರ ಕಳೆದ ವಾರ ಕಡಿತಗೊಳಿಸಿತ್ತು. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್‌ ಮಸ್ಕ್‌ ಅವರು ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು.  ಕಾರ್ಯದಕ್ಷತಾ ಇಲಾಖೆಯ ನಿರ್ಧಾರವನ್ನು ಟ್ರಂಪ್‌ ಅವರು ಈಗ ಸಮರ್ಥಿಸಿಕೊಂಡಿದ್ದಾರೆ.

ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಭಾರತದ ಚುನಾವಣೆಯಲ್ಲಿ ಅಮೆರಿಕ ಯಾಕೆ ಆಸಕ್ತಿ ಹೊಂದಿದೆ ಎಂದು ಪ್ರಶ್ನಿಸಿದೆ. ಈ ವಿಚಾರದ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಪ್ರತಿಕ್ರಿಯಿಸಿ, ಚುನಾವಣಾ ಆಯೋಗವು USAID ತಿಳುವಳಿಕೆ ಪತ್ರ (MoU) ಮಾಡಿಕೊಂಡಿತ್ತು. ಆದರೆ ಯಾವುದೇ ಹಣಕಾಸಿನ ನೆರವು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Share This Article