ಬೆಳಗಾವಿ: ಕಾಂಗ್ರೆಸ್ (Congress) ಪಕ್ಷವು ದ್ವೇಷ ಭಾಷಣ ನಿಯಂತ್ರಣ ಮಸೂದೆ ಮೂಲಕ ವಿಪಕ್ಷದ ಧ್ವನಿ ಅಡಗಿಸುವ ಕೆಲಸ ಮಾಡಲು ಹೊರಟಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ(BY Vijayendra) ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮಸೂದೆ ಮೂಲಕ ಪತ್ರಕರ್ತರ ಧ್ವನಿಯನ್ನೂ ನಿಯಂತ್ರಿಸುವ ಕೆಲಸ ಮಾಡಲು ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯಾರಾದರೂ ತಮ್ಮ ಅಭಿಪ್ರಾಯ ತಿಳಿಸಿದರೆ, ಅದನ್ನು ಹತ್ತಿಕ್ಕಿ, 7-8 ವರ್ಷ ಜೈಲಿಗೆ ಹಾಕುವ ದುಸ್ಸಾಹಸಕ್ಕೆ ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ಇದನ್ನು ವಿರೋಧಿಸುತ್ತೇವೆ. ಸ್ಪೀಕರ್ ಅವರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಬೈರತಿ ಸುರೇಶ್ ಅವರು ಕರಾವಳಿ ಭಾಗದ ಮತದಾರರಿಗೆ ಅಪಮಾನ ಮಾಡಿದ್ದಾರೆ. ಸದನ ಪ್ರಾರಂಭವಾದ ಬಳಿಕ ಈ ಬಿಲ್ ಚರ್ಚೆಗೆ ಒತ್ತಾಯಿಸುವುದಾಗಿ ಹೇಳಿದರು. 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದರು.
ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ 8 ತಿಂಗಳಿಂದ ಈ ಕಾಂಗ್ರೆಸ್ ಸರಕಾರ ಗೌರವಧನ ಕೊಟ್ಟಿಲ್ಲ. ಕಾರಣ ಏನು? ಖಜಾನೆ ಖಾಲಿಯೇ ಅಲ್ಲವೇ? ಯಾವನಿಗೋ ದಬ್ಬಾಳಿಕೆ, ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಬರಬೇಡಿ. ನಾನೊಬ್ಬ ಜನಪ್ರತಿನಿಧಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವಿರೋಧದ ಮಧ್ಯೆ ದ್ವೇಷ ಭಾಷಣ ಮಸೂದೆ ಪಾಸ್ – ಪ್ರತಿಯನ್ನು ಹರಿದು ಹಾಕಿ ವಿಪಕ್ಷಗಳಿಂದ ಆಕ್ರೋಶ
ಖಜಾನೆ ಖಾಲಿ ಎಂದರೆ ಸಿಟ್ಟೇಕೆ?
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಭ್ರಷ್ಟಾಚಾರದ ಕುರಿತು ತಮ್ಮ ಬಾಯಲ್ಲಿ ಮಾತನಾಡದೇ ಇರುವುದು ಒಳ್ಳೆಯದು. ರಾಜ್ಯದ ರಾಜಕೀಯದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರೆಂದು ಕೇಳಿದರೆ ಕಾಂಗ್ರೆಸ್ ಪಕ್ಷದವರುಹೆಸರು ಹೇಳುತ್ತಾರೆ
ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರದ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಶಿವಕುಮಾರ್ ಅವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ವಿಪಕ್ಷದ ಪ್ರಶ್ನೆಗೆ ಉತ್ತರ ಕೊಡುವ ತಾಕತ್ತಿದ್ದರೆ ಸದನದಲ್ಲಿ ಬಂದು ಮಾತನಾಡಲಿ ಎಂದು ಆಗ್ರಹಿಸಿದರು.
ಎರಡೂವರೆ ವರ್ಷ ಕಳೆದರೂ 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಮಾಡಿಲ್ಲ. ಗುಂಡಿಗಳನ್ನು ಮುಚ್ಚಿಲ್ಲ, ಜಗಳೂರು ತಾಲ್ಲೂಕಿನ ನಿರುದ್ಯೋಗಿ ಯುವಕ ಅಂಜಿನಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಳ ಮೀಸಲಾತಿ ನೆಪದಲ್ಲಿ ಹುದ್ದೆ ಮಾಡುತ್ತಿಲ್ಲ ಎಂದು ದೂರಿದರು.
ಲಜ್ಜೆಗೆಟ್ಟ ಕ್ರಮ
ಮುಖ್ಯಮಂತ್ರಿಗಳ ತವರು ಜಿಲ್ಲೆಯ ಚೈತ್ರಾ ಬಿ ಕೊಕ್ಕೊ ಸ್ಪರ್ಧೆಯಲ್ಲಿ 32 ಬಾರಿ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಅಕ್ಕಪಕ್ಕದ ರಾಜ್ಯಗಳು ಇಂಥ ಕೊಕ್ಕೋ ಪ್ರತಿಭೆಗೆ 1 ಕೋಟಿ ರೂ., 2 ಕೋಟಿ ರೂ.ಪ್ರಶಸ್ತಿ ಕೊಟ್ಟಿವೆ. ಲಜ್ಜೆಗೆಟ್ಟ, ನಾಚಿಕೆಗೇಡಿನ ಕಾಂಗ್ರೆಸ್ ಸರಕಾರವು ಅಂಥ ಪ್ರತಿಭೆಗೆ ಕೇವಲ 5 ಲಕ್ಷ ರೂ. ಕೊಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆ ಯುವತಿ 5 ಲಕ್ಷವನ್ನು ಸರಕಾರದ ಮುಖಕ್ಕೆ ಬಿಸಾಕಿದ್ದಾಳೆ. ಖಜಾನೆ ಖಾಲಿ ಆಗಿಲ್ಲ ಎಂದರೆ ಇದೇನು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

