LatestLeading NewsMain PostNational

ಭಾರತದ ಭದ್ರ ಬುನಾದಿ ದುರ್ಬಲಗೊಳಿಸಲಾಗುತ್ತಿದೆ: ಸೋನಿಯಾ ಗಾಂಧಿ

ನವದೆಹಲಿ : ಭಾರತದ ಭದ್ರ ಬುನಾದಿ ದುರ್ಬಲಗೊಳಿಸಲಾಗುತ್ತಿದೆ. ಭಾರತದ ಇತಿಹಾಸವನ್ನು ತಿರುಚಲಾಗುತ್ತಿದೆ. ದೇಶದ ಸಾಮಾನ್ಯ ಪ್ರಜೆಗೆ ಅಭದ್ರತೆ ಮತ್ತು ಭಯ ಕಾಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬದಿಗೊತ್ತಿ ಸರ್ವಾಧಿಕಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

136ನೇ ಕಾಂಗ್ರೆಸ್ ಸಂಸ್ಥಾಪನ ದಿನದ ಹಿನ್ನಲೆ ಕಾರ್ಯಕರ್ತರಿಗಾಗಿ ಸೋನಿಯಾಗಾಂಧಿ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಈ ವೀಡಿಯೋ ಸಂದೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ದೇಶದ ಪರಂಪರೆಯನ್ನು ನಾಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಜನಸಾಮಾನ್ಯರಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ, ದೇಶ ವಿರೋಧಿ, ಸಮಾಜ ವಿರೋಧಿ ಷಡ್ಯಂತ್ರಗಳ ವಿರುದ್ಧ ಸಾಧ್ಯವಿರುವ ಎಲ್ಲ ಹೋರಾಟವನ್ನು ಮಾಡುತ್ತೇನೆ. ಪ್ರತಿಯೊಬ್ಬ ಕಾಂಗ್ರೆಸಿಗರು ಇದೇ ನಿರ್ಣಯ ಕೈಗೊಂಡು ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ಮುನ್ನ ಕಾಂಗ್ರೆಸ್ ಇತಿಹಾಸವನ್ನು ನೆನಪಿಸಿದ ಸೋನಿಯಾಗಾಂಧಿ, ಕಾಂಗ್ರೆಸ್ ಮತ್ತು ಅದರ ಎಲ್ಲಾ ನಾಯಕರು ಸ್ವಾತಂತ್ರ್ಯ ಚಳವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ ಹೋರಾಡಿದರು. ಜೈಲುಗಳಲ್ಲಿ ತೀವ್ರ ಚಿತ್ರಹಿಂಸೆ ಅನುಭವಿಸಿದರು. ಅನೇಕ ದೇಶಭಕ್ತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಆಗ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯದ ನಂತರ ನಾವು ಪಡೆದ ಭಾರತವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ನಮ್ಮ ಮಹಾನ್ ನಾಯಕರು ಉತ್ತಮ ತಿಳುವಳಿಕೆ ಮತ್ತು ಸಂಕಲ್ಪದಿಂದ ಭಾರತದ ಹೊಸ ನಿರ್ಮಾಣಕ್ಕೆ ಬಲವಾದ ಅಡಿಪಾಯವನ್ನು ಹಾಕಿದ್ದಾರೆ.

ಈ ಅಡಿಪಾಯದ ಮೇಲೆ ನಾವು ಬಲಿಷ್ಠ ಭಾರತವನ್ನು ನಿರ್ಮಿಸಿದ್ದೇವೆ. ದೇಶದ ಜನರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಿದ್ದೇವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದವರಿಗೆ ಈ ಹೋರಾಟದ ಮೌಲ್ಯವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಂದು ಅವರು ಭಾರತದ ಆ ಭದ್ರ ಬುನಾದಿಯನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕುಟುಕಿದ್ದಾರೆ.

Leave a Reply

Your email address will not be published.

Back to top button