ಮಂಗಳೂರು: ಮಂಗಳೂರು ದಸರಾ (Mangaluru Dasara) ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnath Kshetra) ಪೂಜಿಸಲ್ಪಡುವ ಮೂರ್ತಿಗಳೇ ಎಲ್ಲರನ್ನು ಆಕರ್ಷಿಸುತ್ತವೆ. ಮುದ್ದು ಮುಖದ ಶಾರದಾ ಮಾತೆ ಸೇರಿ ಎಲ್ಲಾ ದೇವರ ಮಣ್ಣಿನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದ ವಾತಾವರಣದಂತಿರುತ್ತದೆ. ನವರಾತ್ರಿಯಲ್ಲಿ ಬರುವ ಎಲ್ಲ ಲಕ್ಷಾಂತರ ಜನರಿಗೆ ಅಲ್ಲಿನ ದೇವಿಯ ಮೂರ್ತಿಗಳೇ ಮುಖ್ಯವಾಗಿ ಸೆಳೆಯುತ್ತವೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಮೆರಗು ನೀಡುವುದೇ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಣ್ಣಿನ ಮೂರ್ತಿಗಳು. ಈ ಮೂರ್ತಿಗಳನ್ನ ನೋಡುವ ಸಲುವಾಗಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಜೊತೆಗೆ ಒಂದೇ ಸೂರಿನಡಿ ನವದುರ್ಗೆಯರು, ಶಾರದಾ ಮಾತೆಯ ಪ್ರತಿಷ್ಟಾಪನೆ, ಆರಾಧನೆ ದೇಶದ ಬೇರೆಲ್ಲೂ ನಡೆಯುವುದಿಲ್ಲ. ಇಂತಹ ಅದ್ಬುತ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಎನ್ನುತ್ತಾರೆ. ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಮೂರ್ತಿಗಳನ್ನು ರಚಿಸಿ ಅದಕ್ಕೆ ಜೀವ ತುಂಬುವ ಆ ಕಲಾವಿದರ ಕೈಚಳಕವೇ ಅದ್ಭುತ.
ನವರಾತ್ರಿ ಉತ್ಸವ ಆರಂಭವಾದ ದಿನಗಳಲ್ಲಿ ಶಿವಮೊಗ್ಗದ ಬಿ.ಜೆ.ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಇದೀಗ ಅದೇ ತಂಡದಲ್ಲಿ ಕಲಾವಿದನಾಗಿ ಶಿವಮೊಗ್ಗದ ಕುಬೇರ ತನ್ನ 18 ವರ್ಷದ ಪ್ರಾಯದಲ್ಲಿಯೇ ಕೆಲಸ ಆರಂಭಿಸಿದ್ದರು. ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ ಕಳೆದ ಏಳು ವರ್ಷದಿಂದ ನವರಾತ್ರಿಯ ಎಲ್ಲಾ 12 ಮೂರ್ತಿಗಳನ್ನು ರಚಿಸುತ್ತಾರೆ. ದೇವತೆಯ ಸ್ವರೂಪವಾದ ಮೂರ್ತಿಗಳನ್ನು ರಚಿಸುವಾಗ ಈ ಎಲ್ಲಾ ಕಲಾವಿದರು ಶ್ರದ್ದೆ, ನಿಷ್ಠೆ, ಭಕ್ತಿಯ ಜೊತೆ ವೃತಾಚರಣೆ, ಜಪವನ್ನು ಮಾಡಿ ಮೂರ್ತಿಗಳನ್ನು ರಚಿಸುತ್ತಾರೆ. ಆದೇ ಮಣ್ಣಿನಿಂದಲೇ ಪರಿಸರ ಪ್ರೇಮಿ ಬಣ್ಣಗಳನ್ನು ಬಳಸಿ ಮೂರ್ತಿಗಳ ರಚನೆ ಮಾಡುತ್ತಾರೆ. ದೇವಿಯೇ ನಮ್ಮ ಕೈಯಿಂದ ಈ ರೀತಿ ಸುಂದರವಾಗಿ ಮಾಡಿಸುತ್ತಾರೆ ಎನ್ನುವುದು ಕಲಾವಿದರ ಮಾತು.
ಸುಮಾರು 40 ದಿನಗಳ ಕಾಲ ರಾತ್ರಿ-ಹಗಲು ಈ 12 ಮೂರ್ತಿಗಳನ್ನು 15 ಮಂದಿ ಕಲಾವಿದರು ಸೇರಿ ರಚನೆ ಮಾಡಿದ್ದಾರೆ. ಪ್ರತೀ ವರ್ಷವೂ ವಿಸರ್ಜನೆಗೊಳ್ಳುವ ಈ ಮೂರ್ತಿಗಳು ಮತ್ತೆ ಮುಂದಿನ ವರ್ಷ ಪ್ರತ್ಯಕ್ಷವಾಗಿದೆಯೇ ಅನ್ನುವಷ್ಟರ ಮಟ್ಟಿಗೆ ಅಷ್ಟೇ ಸುಂದರವಾಗಿ ಈ ಕಲಾವಿದರ ತಂಡ ಪ್ರತಿ ವರ್ಷ ಮೂರ್ತಿಗಳನ್ನು ರಚಿಸುತ್ತಾರೆ.