ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸೋಕೆ ಬಿಜೆಪಿ ಪಕ್ಷದ ನಾಯಕರೇ ಸಾಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಮುಳುಗಿಸೋಕೆ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಮತ್ತು ಗೋ ಮಧುಸೂದನ್ ಸಾಕು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
Advertisement
ಈ ಐದು ಜನರೇ ಬಿಜೆಪಿಯನ್ನ ಮುಳುಗಿಸುತ್ತಾರೆ. ಒಬ್ಬರು ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದರೆ, ಇನ್ನೊಬ್ಬರು ಬೆಂಕಿ ಹಚ್ಚಬೇಕು ಅಂತಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ರಾಜ್ಯಕ್ಕೆ ಬೆಂಕಿ ಹಚ್ಚಬೇಕು ಅಂತಾರೆ. ಇಂತಹವರನ್ನ ಜನ ಗೆಲ್ಲಿಸುವುದಿಲ್ಲ. ಜೈಲಿಗೆ ಹೋದವರನ್ನ ಜನರು ಮರೆಯುತ್ತಾರೆ. ಆದರೆ ಅನ್ನ, ಕ್ಷೀರ, ಮನೆ ಕೊಟ್ಟವರನ್ನ ರಾಜ್ಯದ ಜನ ಮರೆಯೊಲ್ಲ ಅಂತ ಯಡಿಯೂರಪ್ಪ, ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
Advertisement
ಗುಜರಾತ್‍ನಲ್ಲೇ ಮೋದಿ ಹವಾ ಇಲ್ಲ. ಇನ್ನು ಕರ್ನಾಟಕದಲ್ಲಿ ಮೋದಿ ಹವಾ ನಡೆಯುತ್ತಾ? ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಅವರಂತಹ ನಾಯಕರು ಸಿಕ್ಕಿದ್ರೆ ಬಿಜೆಪಿ ಧೂಳಿಪಟ ಆಗ್ತಿತ್ತು ಎಂದರು.
Advertisement
ಜನಾರ್ದನ ಪೂಜಾರಿ ಹಾಗೂ ರಮಾನಾಥ್ ರೈ ಕಣ್ಣೀರು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಅವರಿಬ್ಬರು ಗುರು ಶಿಷ್ಯರು ಇದ್ದಂತೆ. ಇದೆಲ್ಲ ಸರಿ ಹೋಗುತ್ತೆ. ಇದರಲ್ಲಿ ಬೇರೆ ಯಾರು ರಾಜಕೀಯಕ್ಕೆ ಬಳಸಿಕೊಳ್ಳೋದು ಬೇಡ ಎಂದ್ರು.
Advertisement
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿದಂತೆ, ಅದನ್ನ ಮಾಧ್ಯಮದವರು ನೈತಿಕ ಪೊಲೀಸ್ ಗಿರಿ ಎನ್ನಬಾರದು. ಇದು ಗೂಂಡಾಗಿರಿ ಅಂತ ಕರೆಯಬೇಕು. ಇಂತಹ ಗೂಂಡಾಗಿರಿ ಯಾರೇ ಮಾಡಿದ್ರು ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಜನರನ್ನ ಇಬ್ಭಾಗ ಮಾಡಲು ಕೆಲವರು ಹೀಗೆ ಮಾಡುತ್ತಿದ್ದಾರೆ. ಜನರು ಈ ಬಗ್ಗೆ ಸರಿಯಾಗಿ ನಿರ್ಧಾರ ಮಾಡಬೇಕು ಎಂದು ಬಿಜೆಪಿ ಮೇಲೆ ಬೊಟ್ಟು ಮಾಡಿದ್ರು.
ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಅವರು, ಎಲ್ಲವನ್ನು ಕಾನೂನಿನ ಅಡಿಯಲ್ಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಮುಖಂಡರನ್ನ ಈ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬೇರೆ ಧರ್ಮಗಳಲ್ಲೂ ಕೆಲ ಪದ್ಧತಿಗಳಿವೆ. ಎಲ್ಲವನ್ನು ಕಾನೂನಿನ ಮೂಲಕವೇ ಸರಿ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ವಿಧೇಯಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಮೇಲೆ 9 ಲಕ್ಷ ಬೋಗಸ್ ಕಾರ್ಡ್ ಪತ್ತೆಹಚ್ಚಲಾಗಿದೆ. ಅನ್ನಭಾಗ್ಯ, ಕನ್ನ ಭಾಗ್ಯ ಅಂತಿದ್ದ ವಿರೋಧ ಪಕ್ಷ ಈಗ ಇದು ಒಳ್ಳೆ ಭಾಗ್ಯ ಅಂತಿದ್ದಾರೆ. ಸದ್ಯಕ್ಕೆ ರೇಷನ್ ಕಾರ್ಡ್ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ ಎಂದರು.
ಪಡಿತರ ಚೀಟಿಗಾಗಿ 15 ಲಕ್ಷ 47 ಸಾವಿರ ಜನ ಅರ್ಜಿ ಹಾಕಿದ್ರು. ಇದರಲ್ಲಿ 15 ಲಕ್ಷ 25 ಚೆಕ್ ಲೀಸ್ಟ್ ತೆಗೆದು ತಹಶೀಲ್ದಾರ್ ರಿಂದ ಪರಿಶೀಲನೆ ಮಾಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿತ್ತು. ಜಾತಿ ಮತ್ತು ವರಮಾನದ ಪರಿಶೀಲನೆ ಮಾಡಿಸಲಾಗಿದ್ದು, 14 ಲಕ್ಷ 92 ಸಾವಿರ ಫೀಲ್ಡ್ ವೆರಿಫಿಕೇಷನ್ ಮುಗಿದಿದೆ. 13 ಲಕ್ಷ ಗ್ರಾಮೀಣ ಭಾಗದಲ್ಲಿ ಕ್ಲಿಯರ್ ಆಗಿದೆ. 11 ಲಕ್ಷ ಕಾರ್ಡ್ ಪ್ರಿಂಟ್ ಆಗಿ ಫಲಾನುಭವಿಗಳಿಗೆ ತಲುಪಿದೆ. ಸ್ಪೀಡ್ ಪೋಸ್ಟ್ ಮೂಲಕ ಫಲಾನುಭವಿಗಳ ಕೈಗೆ ಸೇರಿದೆ. ahara.kar.nic.in ವೆಬ್‍ಗೆ ಹೋದ್ರೆ ಪಡಿತರ ಚೀಟಿ ವಿವರ ಸಾರ್ವಜನಿಕರಿಗೆ ಲಭ್ಯವಾಗುತ್ತೆ. ಪಡಿತರ ಚೀಟಿಗಾಗಿ ಸಲ್ಲಿದ್ದ ಅರ್ಜಿಯಲ್ಲಿ 26 ಸಾವಿರ ಅರ್ಜಿ ರಿಜೆಕ್ಟ್ ಆಗಿದೆ. ರಿಜೆಕ್ಟ್ ಆದ ಅರ್ಜಿಗಳನ್ನ ವೆಬ್‍ಸೈಟ್‍ಗೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಅನ್ಯಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಅಂತಾರೆ. ಬಿಜೆಪಿ ರಾಜ್ಯಗಳಲ್ಲಿ ಯಾಕೆ ಈ ಯೋಜನೆ ಇಲ್ಲ. ಅಷ್ಟು ಬದ್ಧತೆ ಇದ್ದರೆ ಬೇರೆ ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ತರಲಿ. ಸಿದ್ದರಾಮಯ್ಯ ಕೆಲಸ ಮಾಡೋದು ನೀವು ಹೆಸರು ಪಡೆಯೋದು ಸರಿಯಲ್ಲ ಎಂದು ವಿಪಕ್ಷಗಳಿಗೆ ಯುಟಿ ಖಾದರ್ ಟಾಂಗ್ ಕೊಟ್ಟರು.