ರಾಯಚೂರು: ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಯಾವುದೇ ತಾರತಮ್ಯ ಮಾಡಬಾರದು. ಎಲ್ಲರೂ ಜೀವಿಗಳು, ಪ್ರಾಣ ಕಳೆದುಕೊಂಡವರೆಲ್ಲ ಸಮಾನರು. ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಕೋರುತ್ತೇನೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.
ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ, ಮುಸ್ಲಿಂ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಸರ್ಕಾರದಿಂದ ತಾರತಮ್ಯ ಆರೋಪದ ಬಗ್ಗೆ ಮಾತನಾಡಿ, ಹತ್ಯೆಯಾದ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಂತಿಮ ಪರ್ಯಾಯವಲ್ಲ. ಹಣಕ್ಕೆ ಮತ್ತು ಜೀವಕ್ಕೆ ತುಲನೆ ಮಾಡಲು ಬರುವುದಿಲ್ಲ. ಆದರೆ ಕುಟುಂಬದವರಿಗೆ ತೊಂದರೆಯಾಗಬಾರದು ಎಂದು ಪರಿಹಾರ ನೀಡುತ್ತಾರೆ. ಆಯಾ ರಾಜ್ಯ ಸರ್ಕಾರಗಳು ಪ್ರಾಣ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್
ದೇಶ ನೆಮ್ಮದಿ, ಪ್ರಗತಿ ಹೊಂದಬೇಕು ಎಂದರೆ ಶಾಂತಿ ಸೌಹಾರ್ದತೆಯಿರಬೇಕು. ಯಾವುದೇ ಸಮುದಾಯದವರು ಇತರ ಸಮುದಾಯದ ಮೇಲೆ ಆಕ್ರಮಣ, ಬೆದರಿಕೆ, ದಬ್ಬಾಳಿಕೆ ಮಾಡಬಾರದು. ಯಾವುದೇ ಸಮುದಾಯದವರು ಮಾಡಿದರೂ ಶಾಂತಿಯುತವಾಗಿ ತೀವ್ರವಾಗಿ ವಿರೋಧಿಸುತ್ತೇವೆ. ಭದ್ರತೆ, ಶಾಂತಿ, ನೆಮ್ಮದಿ ದೇಶದ ಉದ್ದೇಶ. ಯಾವುದೇ ಸಮುದಾಯದವರ ಮೇಲೂ ದಬ್ಬಾಳಿಕೆಯಾಗಬಾರದು. ಯಾರ ಮೇಲೂ ದಬ್ಬಾಳಿಕೆಯಾಗದಂತೆ ಸರ್ಕಾರ ಗಮನಿಸಬೇಕು ಎಂದು ಮಂತ್ರಾಲಯ ಶ್ರೀಗಳು ಹೇಳಿದರು. ಇದನ್ನೂ ಓದಿ: ಆ.10 ರಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ