ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

Public TV
2 Min Read
Pranjal

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (MV Pranjal) ಸೇರಿದ್ದಾರೆ.

ಹುತಾತ್ಮ ಯೋಧ (Soldier) ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಬಂಧು-ಬಳಗದವರು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಯೋಧರು ಹುತಾತ್ಮ

Pranjal

ಸದ್ಯ ಪ್ರಾಂಜಲ್‌ ಪಾರ್ಥೀವ ಶರೀರ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದೆ. ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಕುಟುಂಬಸ್ಥರಿಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಪ್ರಾಂಜಲ್‌ ಹುತಾತ್ಮನಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಆಪ್ತರು ಮನೆಯ ಬಳಿ ಜಮಾಯಿಸಿದ್ದಾರೆ. ಗುರುವಾರ (ನ.23) ಬೆಂಗಳೂರಿಗೆ ಪಾರ್ಥಿವ ಶರೀರ ಬರುವುದು ಬಹುತೇಕ ಅನುಮಾನ, ಶುಕ್ರವಾರ ಮುಂಜಾನೆ ವೇಳೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಮನೆಯ ಸಮೀಪ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಮನೆಯ ಮುಂಭಾಗ ಸ್ವಚ್ಛತಾ ಕಾರ್ಯವೂ ನಡೆಯುತ್ತಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿ ನಿವಾಸವಿದ್ದು, 2014ರಿಂದ ಪ್ರಾಂಜಲ್ ಪೋಷಕರು ಅಲ್ಲಿ ವಾಸವಿದ್ದಾರೆ. ಕಳೆದ 6 ತಿಂಗಳ ಹಿಂದೆ ದಸರಾ ಹಬ್ಬಕ್ಕೆ ಮನೆಗೆ ಬಂದಿದ್ದ ಪ್ರಾಂಜಲ್‌, ಮನೆಯ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು. ಒಂದು ವಾರ ಪೋಷಕರ ಜೊತೆಯಿದ್ದು ಮತ್ತೆ ಕರ್ತವ್ಯಕ್ಕೆ ಮರಳಿದ್ದದರು. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ – ನೀರು ನಿಯಂತ್ರಣ ಸಮಿತಿ ಹೇಳಿದ್ದೇನು?

2 ವರ್ಷಗಳ ಹಿಂದೆ ಮದುವೆಯಾಗಿತ್ತು: ಮೂಲತಃ ಮೈಸೂರಿನವರಾದ ಪ್ರಾಂಜಲ್‌ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಏಕೈಕ ಪುತ್ರ. ಮಂಗಳೂರಿನ MRPL ಶಾಲೆಯಲ್ಲಿ, ಪಿಯು ಶಿಕ್ಷಣವನ್ನು ಮಹೇಶ್ ಪಿ.ಯು ಕಾಲೇಜಿನಲ್ಲಿ ಮುಗಿಸಿದ್ದರು. ಉನ್ನತ ಶಿಕ್ಷಣಕ್ಕಾಗಿ ಮಧ್ಯ ಪ್ರದೇಶದ ಆರ್ಮಿ ಕಾಲೇಜಿಗೆ ಸೇರಿಕೊಂಡರು. ಪ್ರಾಂಜಲ್‌ 2 ವರ್ಷಗಳ ಹಿಂದೆ ಕಾಶ್ಮೀರಕ್ಕೆ ತೆರಳಿದ್ದರು, ತೆರಳುವುದಕ್ಕೂ ಮುನ್ನ ಬೆಂಗಳೂರಿನ ಅದಿತಿ ಎಂಬವರ ಜೊತೆ ವಿವಾಹವಾಗಿತ್ತು. ಪತಿ ಕಾಶ್ಮೀರಕ್ಕೆ ತರಳಿದ್ದು, ಅದಿತಿ ಚೆನ್ನೈ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪತಿ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.

Share This Article