Districts
ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

– ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ
– ಈಗ ನಿಮ್ಮ ಸರ್ಕಾರವಿಲ್ಲ, ಇಲ್ಲಿ ನೀವು ಮಂತ್ರಿಗಳಲ್ಲ
– ಧರ್ಮದ ವಿರುದ್ಧ ಮೋಸ ಮಾಡಬೇಡಿ
ರಾಮನಗರ: ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ. ತಿರುಪತಿಯಲ್ಲಿ 1 ಸಾವಿರ ಕ್ರಿಶ್ಚಿಯನ್ನರಿಗೆ ಮನೆ ಕಟ್ಟಿ ಕೊಟ್ಟ. 400 ಜನರಿಗೆ ತಿರುಪತಿಯಲ್ಲಿ ಕೆಲಸ ಕೊಟ್ಟ ಹಿಂದುಯೇತರರಿಗೆ ತಿರುಪತಿ ಪ್ರವೇಶ ಇಲ್ಲ. ಒಬ್ಬ ಮತಾಂತರಿ ಏನು ಮಾಡಿದ ಎನ್ನುವುದಕ್ಕೆ ರಾಜಶೇಖರ ರೆಡ್ಡಿ ಉದಾಹರಣೆ. ರಾಜಶೇಖರ ರೆಡ್ಡಿ ಕೊನೆಗೆ ಏನಾದ ಗೊತ್ತಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿ ಶಿವಕುಮಾರ್ ಅವರೇ ನೀವು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತೀರಿ ಎಂಬುದು ನೆನಪಿರಲಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದರ್ ತೆರೆಸಾ ಕ್ರೈಸ್ತ ಮಿಷನರಿಗಳಿಂದ ದುಡ್ಡು ತೆಗೆದುಕೊಂಡು ಲೆಕ್ಕ ಕೊಟ್ಟಿಲ್ಲ. ಸೇವೆ ಹೆಸರಲ್ಲಿ ಶಿಲುಬೆ ಹಾಕುತ್ತಿದ್ದರು ಇದನ್ನ ಇಂಗ್ಲೆಡಿನ ಕ್ರಿಶ್ಚಿಯನ್ ಒಬ್ಬ ಪ್ರಶ್ನಿಸಿದ. ಇವತ್ತು ನಿಮ್ಮ ಸರ್ಕಾರವಿಲ್ಲ. ಇಲ್ಲಿ ನೀವು ಮಂತ್ರಿಗಳಲ್ಲ, ಕಂತ್ರಿಗಳು ನೀವು. ಏನೇ ಮಾಡಿದರೂ ನೆಲವೇ ಗತಿ. ನಾನು ರಾಜಕಾರಣಿಯಂತೆ ಮಾತನಾಡುವುದಿಲ್ಲ. ಕೆಟ್ಟ ರಾಜಕಾರಣಕ್ಕೆ ಮುಂದಾಗಬೇಡಿ ಎಂದರು. ಇದನ್ನೂ ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ
ಇದು ಕೃಷ್ಣನ ನಾಡು:
ಅಲ್ಪಸಂಖ್ಯಾತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡ್ತಿದ್ದೀರಾ? ಇದು ಹಿಂದೂ ಧರ್ಮದ ಭೂಮಿ, ಅಲ್ಲಿ ಹಿಂದೂಗಳ ಪ್ರತಿಮೆಯಾಗಬೇಕು ಏಸುವಿನದ್ದಲ್ಲ. ಏಸುವಿನ ಹೆಸರಿನಲ್ಲಿ ಮೋಸ ಮಾಡ್ತೀರಲ್ಲ. ಅಲ್ಲಿರುವ 223 ಕುಟುಂಬದವರಿಗೆ ಜಾಗ ಕೊಡ್ತೀರಾ? ಭೂಮಿ ಆಸೆ ತೋರಿಸಿ ಮತಾಂತರ ಮಾಡ್ತೀರಲ್ಲ ಯಾಕೆ? ಇಡೀ ಗ್ರಾಮವನ್ನು ಕ್ರಿಶ್ಚಿಯನ್ ಗ್ರಾಮ ಮಾಡಲು ಹೋಗ್ತಿದ್ದೀರಾ. ಈ ದೇಶದಲ್ಲಿ ಕ್ರಿಸ್ತನ ನಾಡಿದ್ಯಾ? ಕ್ರಿಸ್ತನ ನಾಡಲ್ಲ ಕೃಷ್ಣನ ನಾಡಿದೆ. ದೇಶದ ಹಲವೆಡೆ ಮತಾಂತರ ನಡೆದು ಕ್ರಿಶ್ಚಿಯನ್ ಗೆ ಬದಲಾಗಿದ್ದಾರೆ. ಈ ಭೂ ಭಾಗವನ್ನು ಮತ್ತೆ ಇಂಗ್ಲೆಂಡ್‍ಗೆ ತೆಗೆದುಕೊಂಡು ಹೋಗುವ ಪ್ರಯತ್ನ ಅವರದ್ದು ಎಂದು ಪ್ರಭಾಕರ ಭಟ್ ದೂರಿದರು.
ಹಲವಾರು ವರ್ಷಗಳಿಂದ ಹೊರದೇಶದಲ್ಲಿ ನಮ್ಮವರ ಮೇಲೆ ಲಕ್ಷಾಂತರ ಅತ್ಯಾಚಾರ, ಕೊಲೆ ನಡೆದಿವೆ. ಇಷ್ಟು ದಿನ ಪೌರತ್ವ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಸರ್ಕಾರ ಪೌರತ್ವಕ್ಕೆ ಮುಂದಾಗಿದೆ. ನಾನು ಈ ದೇಶದ ಮಗ ಎನ್ನಲು ಪೌರತ್ವ ಕಾಯ್ದೆ ಬೇಕು. ಮಂಗಳೂರಿನಲ್ಲಿ ಪೊಲೀಸರ ಮೇಲೆ ಎಸೆದ ಕಲ್ಲು ಡಿಕೆಶಿ ಕಲ್ಲು ಇರಬಹುದು. ದೇಶದಲ್ಲಿ ಆ ಕಡೆ ಮುಸ್ಲಿಮರು, ಈ ಕಡೆ ಕ್ರೈಸ್ತರು, ಮತ್ತೊಂದು ಕಡೆ ಕಮ್ಯುನಿಸ್ಟರ್ ದೇಶ ನಮ್ಮದು ಎನ್ನುತ್ತಿದ್ದಾರೆ ಈ ಮಧ್ಯೆ ಹಿಂದೂಗಳು ಒದ್ದಾಡುವಂತಾಗಿದೆ. ತಾಕತ್ ಇದ್ದರೆ ಬನ್ನಿ, ಇವತ್ತು ಡಿಕೆಶಿ ವಿರುದ್ಧ ನಾನು ನಿಂತಿಲ್ಲ. ಅಧಿಕಾರ ಅನುಭವಿಸಿದ್ದಾಯ್ತು ಅದಕ್ಕೂ ಇತಿಮಿತಿಗಳು ಇರಲ್ವಾ? ಎಲ್ಲವನ್ನೂ ಡಿಕೆ ಸಹೋದರರು ಅರಿಯಬೇಕು. ಎಂತಹ ಕೆಟ್ಟವರನ್ನ ಆಯ್ಕೆ ಮಾಡಿದ್ದೀರಿ. ಒಳ್ಳೆಯ ಕೆಲಸಕ್ಕೆ ಮುಂದೆ ಬರುವಂತಹವರು ಇರಬೇಕು.
ಭಾರತದಲ್ಲಿ ಬೇಡ:
ಅವರದ್ದು ಭೋಗದ ಭೂಮಿ, ನಮ್ಮದು ತ್ಯಾಗದ ಭೂಮಿ. ಯೋಗ ದಿನಾಚರಣೆ ಬುದ್ಧಿ ಜೀವಿಗಳಿಗೆ ಆಗುವುದಿಲ್ಲ. ಜಗತ್ತು ಈಗ ಭಾರತದ ಕಡೆಗೆ ನೋಡುತ್ತಿದೆ ಡಿಕೆಶಿಯವರೆ, ಹಿಂದೂ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ. ನಾವು ಕೋಮುವಾದಿಗಳಾ? ನೀವು ಕೋಮುವಾದಿಗಳಾ? ನಮಗೆ ಏಸು ಕ್ರಿಸ್ತನ ಪ್ರತಿಮೆ ಬೇಡ, ದೇಶದ ಪರ ಹೋರಾಡಿದವರ ಪ್ರತಿಮೆ ಬೇಕು. ಹಿಂದೂ ಸಮಾಜಕ್ಕಿರುವ ಒಂದೇ ದೇಶ ಭಾರತ ಇಲ್ಲಿ ಏಸು ಪ್ರತಿಮೆ ಇರುವುದು ಬೇಡ ಎಂದು ಆಗ್ರಹಿಸಿದರು.
ಧರ್ಮವಲ್ಲ ಮತಗಳು:
ಎಲ್ಲರನ್ನು ಒಪ್ಪಿಕೊಳ್ಳುವ, ಎಲ್ಲರನ್ನು ಅಪ್ಪಿಕೊಳ್ಳುವ ಶ್ರೇಷ್ಠವಾದ ಧರ್ಮವೆಂದರೆ ಅದು ಹಿಂದೂ ಧರ್ಮ. ಅನೇಕರು ಹೇಳುತ್ತಾರೆ ಮುಸಲ್ಮಾನ್ ಧರ್ಮ, ಕ್ರೈಸ್ತ ಧರ್ಮ ಎಂದು. ಆದರೆ ಅದು ಧರ್ಮವಲ್ಲ ಮತಗಳು. ಅದು ಯಾವುದೋ ಒಂದು ಪುಸ್ತಕ, ಯಾವುದೋ ಒಂದು ಪ್ರವಾಸಿಗ, ಪದ್ಧತಿ ತಂದ ಮತಗಳು ಅವು. ಅಂತಹ ಬೇರೆ ಬೇರೆ ಮತಗಳು ನಮ್ಮಲಿವೆ. ಅವು ಧರ್ಮವಲ್ಲ ಮತಗಳು ಎಂದು ಹೇಳಿದರು.
ಹಿಂದೂ ಧರ್ಮ ಏನು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧರ್ಮ ಎಂದರೆ ಆರಾಧನೆ ಮಾಡುವುದು ಅಲ್ಲ. ಜೀವನದ ಪದ್ಧತಿಯೇ ಧರ್ಮ. ಹಿಂದೂ ಧರ್ಮ ಎಂದರೆ ಜೀವನದ ಪದ್ಧತಿ. ಆದ್ದರಿಂದ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹಿಂದೂ ಸಾಮಾಜದ ಮೇಲಿದೆ. ಅದಕ್ಕಾಗಿ ಇಂತಹ ಏಸುವಿನ ಪ್ರತಿಮೆ ಬೇಡ ನಮಗೆ. ಅಲ್ಲಿ ಬಸವೇಶ್ವರ, ಬಾಲಗಂಗಾಧರನಾಥ ಮಹಾತ್ಮ ಗಾಂಧೀಜಿ ಅವರದ್ದೋ, ಪೇಜಾವರ ಶ್ರೀಗಳದ್ದೋ ಪ್ರತಿಮೆ ಬೇಕು. ಈ ದೇಶಕ್ಕಾಗಿ, ಧರ್ಮಕ್ಕಾಗಿ ಬದುಕಿದಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಬೇಕು. ಹಿಂದೂಗಳಿಗೆ ಒಂದೇ ಒಂದು ಭೂಮಿ, ಅದು ಭಾರತ ಎಂದರು.
ಹಿಂದೂಗಳಿಗೆ ಜಾಗ ಎಲ್ಲಿ?
ಕನಕಪುರದಲ್ಲಿರುವ ಮುಸ್ಲಿಂ ವ್ಯಕ್ತಿ ಕನಕಪುರ ಬೇಡವೆಂದು ಮಂಗಳೂರಿಗೆ ಹಾರಿದರೆ, ಅಲ್ಲಿಂದ ಬೇರೆ ಕಡೆಗೆ ಹೋದರೆ 70 ಮುಸ್ಲಿಂ ರಾಷ್ಟ್ರಗಳು ಆತನಿಗೆ ನೆಲೆ ನೀಡುತ್ತದೆ. ಹಾಗೆಯೇ ಕ್ರೈಸ್ತ ವ್ಯಕ್ತಿ ದೇಶ ಬೇಡವೆಂದು ಹೋದರೆ ಆತನಿಗಾಗಿ ಸುಮಾರು 70 ಕ್ರೈಸ್ತ ರಾಷ್ಟ್ರಗಳು ಇವೆ. ಆದರೆ ಓರ್ವ ಹಿಂದೂ ಭಾರತದಿಂದ ಹೊರಹೋದರೆ ಆತನಿಗಾಗಿ ಬೇರೆ ದೇಶವಿಲ್ಲ. ಆತ ಹೋಗಿ ಸಮುದ್ರಕ್ಕೆ ಹಾರಬೇಕಾಗುತ್ತೆ. ಹಿಂದೂ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಲು ಇರುವುದು ಒಂದೇ ಒಂದು ದೇಶ. ಇಲ್ಲಿ ನೀವು ಏಸು ಪ್ರತಿಮೆಯನ್ನ ಇಡಬೇಡಿ ಎಂದು ಕಿಡಿಕಾರಿದರು.
ಜನರು ಹೆಲಿಕಾಪ್ಟರ್ ಮೇಲೆ ಹಾರಬಹುದು, ವಿಮಾನದಲ್ಲಿ ಆಕಾಶದಲ್ಲಿ ಸಂಚರಿಸಬಹುದು. ಆದರೆ ಕೊನೆಗೆ ಎಲ್ಲರಿಗೂ ನೆಲವೇ ಗತಿ ತಾನೇ. ಎಲ್ಲರೂ ಭೂಮಿ ಮೇಲೆ ಇಳಿಯಲೇ ಬೇಕು. ಅದಕ್ಕಾಗಿ ಈ ಕೆಟ್ಟದಾದ ರಾಜಕೀಯ ಮಾಡಬೇಡಿ. ಈ ರೀತಿ ರಾಜಕಾರಣಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ವಿರುದ್ಧ ನಿಂತು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಡಿಕೆಶಿ ಸಹೋದರರು ಯಾರಿದ್ದೀರಿ ದಯವಿಟ್ಟು ಹಿಂದಕ್ಕೆ ಬನ್ನಿ. ಮುನೇಶ್ವರ ಬೆಟ್ಟವನ್ನು ಮುನೇಶ್ವರ ಬೆಟ್ಟವನ್ನಾಗಿಯೇ ಇರಲು ಬಿಡಿ ಎಂದು ಕೇಳಿಕೊಂಡರು.
ಏಸುಕ್ರಿಸ್ತ ದೇವರಲ್ಲ, ಅವನು ಸತ್ತ ಬಳಿಕ ಜನಾಂಗ ಸೃಷ್ಟಿ ಮಾಡಿಕೊಂಡರು. ಅವರ ಬಗ್ಗೆ ಗೌರವವಿದೆ, ಅವರ ಹೆಸರಿನಲ್ಲಿ ಮತಾಂತರ, ಮೋಸ ಮಾಡಬೇಡಿ. ದಯವಿಟ್ಟು ಅದನ್ನ ಬಿಟ್ಟು ಬಿಡಿ ನೀವು ಏಸುವನ್ನ ಆರಾಧನೆ ಮಾಡಿ. ನಾವು ಕೃಷ್ಣನ ಆರಾಧಿಸುತ್ತೇವೆ. ವೋಟಿನ, ಸೀಟಿನ, ನೋಟಿನ ರಾಜಕಾರಣ ಮಾಡಬೇಡಿ. ಧರ್ಮದ ವಿರುದ್ಧ ಮೋಸ ಮಾಡಬೇಡಿ. ಸಾಮರಸ್ಯದ ಜೀವನ ಕೆಡಿಸಲು ಅನ್ಯಾಯ ಮಾಡಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿಕೊಂಡರು.