ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಡಿಸಿಎಂ ಗೋವಿಂದ ಎಂ. ಕಾರಜೋಳ ಪ್ರತಿಕ್ರಿಯಿಸಿದ್ದಾರೆ.
ಹಿಂದೂಗಳಲ್ಲಿ ಯಾರೂ ಟೆರರಿಸ್ಟ್ ಇಲ್ಲ. ಹಿಂದೂ ಟೆರರಿಸಂ ಎನ್ನುವ ಪದವನ್ನೇ ನಾನು ಕೇಳಿಲ್ಲ. ಟೆರರಿಸ್ಟ್ ಎಂದರೆ ಪಾಕಿಸ್ತಾನದಿಂದ ಬಂದವರು ಎಂದು ಅಂದುಕೊಂಡಿದ್ದೇನೆ ಎಂದರು.
ಬಾಂಬ್ ಪತ್ತೆ ಪ್ರಕರಣ ಸೂಕ್ತ ತನಿಖೆಯಾಗಲಿ. ತನಿಖಾ ಹಂತದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದು ಬೇಡ. ಇಡೀ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಸೋಮವಾರ ನಾನು ದೆಹಲಿಯಲ್ಲಿ ಇದ್ದೆ. ಇಂದು ಮೈಸೂರಿಗೆ ಬಂದಿದ್ದೇನೆ. ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಪೌರತ್ವ ಬಗ್ಗೆ ಮಾತನಾಡಿದ ಅವರು, ನೊಂದು ಬಂದವರಿಗೂ ಪೌರತ್ವ ಕೊಡಬಾರದಾ ಎಂದು ಪ್ರಶ್ನಿಸಿದ್ದಾರೆ. ನೊಂದು ಬಂದವರಿಗೂ ಪೌರತ್ವ ಕೊಡಬಾರದಾ? ವಿರೋಧ ಪಕ್ಷಗಳು ಸಿಎಎಯನ್ನು ಯಾಕೆ ಇಷ್ಟು ವಿರೋಧ ಮಾಡುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಾರಜೋಳ ವಿಪಕ್ಷಗಳ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನಮೋಹನ್ ಸಿಂಗ್ ಕಾಲದಲ್ಲಿಯೂ ಪೌರತ್ವ ಕಾಯ್ದೆಗೆ ತಿದ್ದುಪಡಿ ಆಗಿದೆ. ಹಾಗೆಲ್ಲ ವಿರೋಧ ಮಾಡದ ಕಾಂಗ್ರೆಸ್ಸಿನವರು ಈಗ ಯಾಕೆ ಇಷ್ಟೊಂದು ಪ್ರತಿರೋಧ ತೋರುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಿಂದ ಬಂದ ಶೋಷಿತರಿಗೆ ಪೌರತ್ವ ನೀಡುತ್ತಿದ್ದೇವೆ. ಜೊತೆಗೆ ಆಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸುತ್ತಿದ್ದೇವೆ. ವಲಸಿಗರು ಇಲ್ಲಿ ಇರುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಇಲ್ಲಿ ನೆಲೆಸಿರುವ ಯಾವೊಬ್ಬರಿಗೂ ತೊಂದರೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಳಿಕ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯಾದರೆ ಜಗತ್ತು ಪ್ರಳಯ ಆಗಿ ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆ ಆದರೆ ಮಹಾ ಸ್ಫೋಟ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಆದರೆ ಸಿದ್ದರಾಮಯ್ಯ ಹೇಳುವಂತೆ ಯಾವ ಸ್ಫೋಟವೂ ಆಗುವುದಿಲ್ಲ, ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಅವರು ಭ್ರಮೆಯಲ್ಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನ ನಮ್ಮ ನಾಯಕರು ನಿರ್ಧಾರ ಮಾಡುತ್ತಾರೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.