– ಆಯುಷ್ ಇಲಾಖೆ ಸಿಬ್ಬಂದಿಗೆ ಇ ಹಾಜರಾತಿ ವ್ಯವಸ್ಥೆ
ಬೆಂಗಳೂರು: ಬೆಂಗಳೂರು (Bengaluru) ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಆಯುಷ್ ಔಷಧಿಗಳ ಕೊರತೆ ಇಲ್ಲ. ಸಿಬ್ಬಂದಿ ಹಾಜರಾತಿ ಬಗ್ಗೆ ತಿಳಿಯಲು ಇ ಹಾಜರಾತಿ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಅವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಆಯುಷ್ ಚಿಕಿತ್ಸಾಲಯಗಳ ಕೊರತೆ ಇದೆ. ಹೆಚ್ಚು ಆಯುಷ್ ಚಿಕಿತ್ಸಾಲಯ ಪ್ರಾರಂಭಿಸಬೇಕು. ಆಯುಷ್ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ವೈದ್ಯರ ನೇಮಕ ಮಾಡಬೇಕು. ಔಷಧಿ ಕೊರತೆ ಇದ್ದು, ಕೂಡಲೇ ಔಷಧಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಗೋಪಿನಾಥನ್ ಅವರ ಮಾತಿಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಬೆಂಗಳೂರು ನಗರ, ಗ್ರಾಮಾಂತರದಲ್ಲಿ 24 ಆಯುಷ್ ಚಿಕಿತ್ಸಾಯಗಳಿವೆ. ಆಯುಷ್ ಚಿಕಿತ್ಸಾಲಯದಲ್ಲಿ ಔಷಧಿಗಳ ಕೊರತೆ ಇಲ್ಲ. ಸಮಯಕ್ಕೆ ಸರಿಯಾಗಿ ಔಷಧಿ ಸರಬರಾಜು ವ್ಯವಸ್ಥೆ ಮಾಡಿದ್ದೇವೆ. ಆಯುಷ್ ವೈದ್ಯರ ಕೊರತೆ ಇದೆ. ಖಾಲಿ ಹುದ್ದೆಗಳ ನೇಮಕ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದರು.
ಆಯುಷ್ ಇಲಾಖೆಯಲ್ಲಿ (Department Of AYUSH) ಹಾಜರಾತಿಗೆ ಇ ಹಾಜರಾತಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಗೈರಾಗುವ ಸಿಬ್ಬಂದಿಗೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.