ಧಾರವಾಡ: ಕಾಂಗ್ರೆಸ್‍ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ನಮ್ಮನ್ನು ಕೀಳಾಗಿ ನೋಡುತ್ತಾರೆ ಎಂದು ಕಾರ್ಯಕರ್ತೆಯೊಬ್ಬರು ಹಿರಿಯ ನಾಯಕಿ ಮೋಟಮ್ಮವರ ಎದುರು ಅಳಲು ತೋಡಿಕೊಂಡಿದ್ದಾರೆ.
ಧಾರವಾಡದಲ್ಲಿ ನಡೆದ ‘ಚುನಾವಣೆ: ಒಳ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಾಯಕಿ ಮೋಟಮ್ಮ ಭಾಗಿಯಾಗಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತೆ ಆಗಿರುವ ಅನಿತಾ ಗುಂಜಾಳ ಎಂಬವರು ತಮ್ಮ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು.
ಪಕ್ಷದಲ್ಲಿ ಲೀಡರ್ ಶಿಪ್ ಸಿಗಲು ಗ್ಲಾಮರ್ ಆಗಿರಬೇಕೆಂತೆ. ನಾನು ಹರಿದ ಸೀರೆಯನ್ನು ಧರಿಸಿ ರಾಜಕಾರಣ ಮಾಡಬಹುದು ಎಂಬ ವಿಚಾರವನ್ನು ಹೊಂದಿರುವ ಮಹಿಳೆ. ಆದ್ರೆ ನಮ್ಮ ನಾಯಕರಿಗೆ ಚುನಾವಣಾ ಪ್ರಚಾರದಲ್ಲಿ ಮಾತ್ರ ಕಾರ್ಯಕರ್ತರು ನೆನಪು ಬರುತ್ತಾರೆ. ಬನ್ನಿ ಮೇಡಂ ನಿಮಗೆ ಸ್ಥಳೀಯ ಜನರು ಪರಿಚಯವಿದ್ದರೆ ಎಂದು ನಮ್ಮ ಪರವಾಗಿ ಪ್ರಚಾರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.
ಕೇವಲ ಪ್ರಚಾರದ ಸಮಯದಲ್ಲಿ ಮಾತ್ರ ಮಹಿಳಾ ಕಾರ್ಯಕರ್ತರು ನೆನಪಾಗುತ್ತಾರೆ. ಆದ್ರೆ ಪ್ರಚಾರದ ವೇಳೆಯಲ್ಲಿಯೂ ನಮಗೆ ಗೌರವ ನೀಡಲ್ಲ. ಗೌರವಯುತವಾದ ಕುಟುಂಬದಿಂದ ಬಂದ ನಮಗೆ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕು. ಪಕ್ಷದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವ್ಯವಸ್ಥೆ ಬದಲಾಗಬೇಕಾಗಿದ್ದು, ಇಂದು ನನಗೆ ನಿಮ್ಮಿಂದ ಉತ್ತರ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಟ್ಟಡವೊಂದರಲ್ಲಿ ಸಭೆ ನಡೆದಿತ್ತು. ಹತ್ತಾರು ಪುರಷರ ನಡುವೆ ನಾನೊಬ್ಬಳೆ ಮಹಿಳೆ. ಆದ್ರೆ ಅಲ್ಲಿ ನನಗೆ ಯಾರು ಗೌರವ ನೀಡಲಿಲ್ಲ. ಬದಲಾಗಿ ಒಬ್ಬ ನಾಯಕ ನನ್ನನ್ನು ಮುಟ್ಟಲು ಬಂದಾಗ, ಆತನನ್ನು ನಾನು ದೂರ ತಳ್ಳಿದ್ದೇನೆ. ಆ ವೇಳೆ ಘಟನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ರೆ ಇವತ್ತಿನ ನಮ್ಮ ನಾಯಕರು ಶಾಸಕರಾಗಿಯೇ ಆಯ್ಕೆ ಆಗುತ್ತಿರಲಿಲ್ಲ. ಕೊನೆಗೆ ಆ ವ್ಯಕ್ತಿ ನನ್ನ ಕಾಲುಗಳನ್ನು ಹಿಡಿದು ಕ್ಷಮೆ ಕೇಳಿಕೊಂಡ ಎಂದು ಹೇಳುತ್ತಾ ಭಾವುಕರಾದರು.
ಮಹಿಳೆಯರನ್ನು ರಾಜಕಾರಣಕ್ಕೆ ಕರೆತರೋದಕ್ಕೆ ನಮಗೆ ಪಕ್ಷದಿಂದ ಯಾವುದೇ ಬೆಂಬಲ ಸಿಗಲ್ಲ. ಪಕ್ಷಕ್ಕಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ. ಮಹಿಳೆಯರಿಗೆ ಸಂಬಂಧಿಸಿದ ಸ್ಥಾನಮಾನಗಳು ಪಕ್ಷದಲ್ಲಿ ಬದಲಾಗಬೇಕಿದೆ ಎಂದು ಆಗ್ರಹಿಸಿದರು.