ಬೆಂಗಳೂರು: ನಾವು ಜಾತ್ಯಾತೀತ ನಿಲುವು ಬಿಡುವ ಪ್ರಶ್ನೇಯೇ ಇಲ್ಲ, ಈ ವಿಚಾರವನ್ನು ಮೊದಲೇ ಸ್ಪಷ್ಟವಾಗಿ ಹೇಳಿದ್ದೇನೆ ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಯೇ ಮಾತನಾಡಿದ್ದೇನೆ. ಅದಾದ ಬಳಿಕ ಕುಮಾರಸ್ವಾಮಿಯವರು ಭೇಟಿಯಾಗಲಿದ್ದಾರೆ ಎಂದು ಅವರ ಬಳಿ ಹೇಳಿದ್ದೇ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Deve Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ಹೋರಾಟದಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗಲು ನಮ್ಮ ಪಕ್ಷ (JDS) ಬಿಟ್ಟಿಲ್ಲ. ಆದರೆ ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ ತೆಗೆದವರು ಯಾರು? ಮುಂಬೈಗೆ ಶಾಸಕರನ್ನು ಕಳಿಸಿಕೊಟ್ಟವರು ಯಾರು? ಬಿಜೆಪಿ (BJP) ಸರ್ಕಾರ ಸ್ಥಾಪನೆ ಮಾಡಲು ಯಾರು ಕಾರಣ? ಹೆಚ್‍ಡಿಕೆ ಸಿಎಂ ಆಗಬೇಕು ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಅವರನ್ನು ಸಿಎಂ ಮಾಡಲು ಗುಲಾಂ ನಬಿ ಅಜಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದರು. ನಾನು ಯಾವುದೇ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಎಂದು ಹೇಳಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದವರು ಸತ್ತಿಲ್ಲ, ಬದುಕಿದ್ದೇವೆ- ಕಾವೇರಿ ಪರ ಧ್ವನಿಯೆತ್ತಿದ ಸಾ ರಾ ಗೋವಿಂದು
ಯಡಿಯೂರಪ್ಪ ಸರ್ಕಾರ ಇದ್ದಾಗ ಮಧ್ಯರಾತ್ರಿ ಸುಪ್ರೀಂಕೋರ್ಟ್‍ಗೆ ಹೋಗಿದ್ದರು. ಈ ವೇಳೆ ಎರಡು ದಿನಗಳಲ್ಲಿ ಬಹುಮತ ಸಾಬೀತು ಮಾಡಬೇಕಾಗಿತ್ತು. ಈಗ ಬಿಜೆಪಿ ಜೊತೆ ಯಾಕೆ ಹೋದರು ಎಂಬ ಚರ್ಚೆ ಆಗುತ್ತಿದೆ. ಬಿಜೆಪಿ ಸೇರ್ಪಡೆ ಬಗ್ಗೆ 19 ಶಾಸಕರು, 8 ಜನ ಎಂಎಲ್‍ಸಿಗಳ ಜೊತೆ ಚರ್ಚೆ ಮಾಡಿದ್ದೆವು. ಅಲ್ಲದೇ ಮಾಜಿ ಶಾಸಕರ ಬಳಿಯೂ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಿಸಲು ಯಾರು ಪ್ಲ್ಯಾನ್ ಮಾಡಿದ್ದಾರೆ ಎಂದು ಚರ್ಚೆ ಆಗಬೇಕು. ರಾಹುಲ್ ಗಾಂಧಿ ನನ್ನನ್ನು ಬಿಜೆಪಿಯ ಬಿ ಟೀಂ ಎಂದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ನನಗೆ ಸರ್ಟಿಫಿಕೇಟ್ ಕೊಡ್ತಾರಾ? ಮಾತಾಡೋ ಮುನ್ನ ಮಾಹಿತಿ ಪಡೆದು ಅವರು ಮಾತನಾಡಬೇಕು. ಅಲ್ಲದೇ ಕಾಂಗ್ರೆಸ್‍ನಿಂದ ಜಾತ್ಯಾತೀತ ಪ್ರಜಾಪ್ರಭುತ್ವ ಕಾಪಾಡಲು ಸಾಧ್ಯವೇ? ಕಾಂಗ್ರೆಸ್ ಕೇವಲ ಒಂದು ಕುಟುಂಬದ ಅಧಿಕಾರಕ್ಕಾಗಿ ರಾಜಕೀಯ ಮಾಡ್ತಿದ್ದಾರೆ. ದೇಶವನ್ನು ದಿನ ಫೂಲ್ ಮಾಡಲು ಹೊರಟಿದ್ದಾರೆ ಎಂದು ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು 10 ತಿಂಗಳು ಪ್ರಧಾನಿಯಾಗಿದ್ದೆ. ರಾಹುಲ್ ಗಾಂಧಿಯವರು ದೇವೇಗೌಡರನ್ನ ಸೋಲಿಸಿದ್ದು ಬಿಜೆಪಿ ಎಂದಿದ್ದಾರೆ. ಅವರು ನನಗೆ ಸರ್ಟಿಫಿಕೇಟ್ ಕೊಡಬೇಕಾ? ಪಾರ್ಲಿಮೆಂಟ್‍ನಲ್ಲಿ ಹಿಂದೆ ಹಣ ಬ್ಯಾಗ್ ಪ್ರದರ್ಶನ ಮಾಡಲಾಯ್ತು. ಆ ಬ್ಯಾಗ್ ಕೊಟ್ಟಿದ್ದು ಯಾರು? ಚಾಮರಾಜನಗರ ನಗರದ ಎಂಪಿ ನ್ಯೂಕ್ಲಿಯರ್ ಬಿಲ್ ಮಂಡನೆ ವೇಳೆ ಹಣ ಪಡೆದು ವೋಟ್ ಹಾಕಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಫಾರೂಕ್ ಅವರನ್ನ ನಿಲ್ಲಿಸಿದ್ದೆ, ಅವರನ್ನು ಸೋಲಿಸಿದರು. ಅಲ್ಪಸಂಖ್ಯಾತ ವ್ಯಕ್ತಿಯನ್ನ ಆ ದಿನ ಸೋಲಿಸಲಾಯಿತು. ಈ ವೇಳೆ 8 ಜನ ನಾಯಕರನ್ನ ಕರೆದುಕೊಂಡು ಗ್ರೇಟ್ ಲೀಡರ್ ಆಫ್ ಮಂಡ್ಯ ಹೊರ ಹೋದರು. ಕುಮಾರಸ್ವಾಮಿ ರಾಜಕೀಯವಾಗಿ ಜೀವನ ಕೊಟ್ಟ ವ್ಯಕ್ತಿಯೇ ವಿರುದ್ಧ ಮತ ಹಾಕಿ ಅವರನ್ನು ಮಂತ್ರಿ ಮಾಡಿದರು ಎಂದು ಪರೋಕ್ಷವಾಗಿ ಚೆಲುವರಾಯಸ್ವಾಮಿ ಹಾಗೂ ಜಮೀರ್ ವಿರುದ್ಧ ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್‍ಗೆ ಜೆಡಿಎಸ್ ಮೋಸ ಮಾಡಿರುವ 100 ಉದಾಹರಣೆಗಳನ್ನ ನಾನು ಕೊಡಬಲ್ಲೆ. ಈ ದೇಶದಲ್ಲಿ ಒಂದು ರಾಜಕೀಯ ಪಕ್ಷವು ಮಡಿವಂತಿಕೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಿಜೆಪಿ ಜೊತೆ ಸಂಬಂಧ ಇಲ್ಲ ಎಂದು ಹೇಳಲಿ ನೋಡೋಣ. ಒಂದಲ್ಲ ಒಂದು ರೀತಿ ಬಿಜೆಪಿ ಜೊತೆಗೆ ಸಂಬಂಧ ಇರಿಸಿಕೊಂಡಿವೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸೋಕೆ ಬಿಜೆಪಿ ಜೊತೆ ಎಡಪಕ್ಷಗಳು ಒಟ್ಟಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈತ್ರಿಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕರ್ನಾಟಕದಲ್ಲಿ ಪಕ್ಷ ಉಳಿಸೋ ಅನಿವಾರ್ಯತೆ ಇದೆ. ಬೇಕಿದ್ರೆ ನಾನು ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತೇನೆ. ಕೇರಳದವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತಯಾರಿದ್ದೇನೆ. ಜೆಡಿಎಸ್ ಅವಕಾಶವಾದಿ ಪಕ್ಷವಲ್ಲ ಎಂದಿದ್ದಾರೆ.
ಸೀಟು ಹಂಚಿಕೆ ವಿಷಯದ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಪ್ರಧಾನಿ ಮೋದಿಯವರ ಜೊತೆ ಈ ವಿಚಾರ ಮಾತಾಡಿಲ್ಲ. ಪಾರ್ಲಿಮೆಂಟರಿ ಬೋರ್ಡ್ ಜೊತೆ ಚರ್ಚೆ ಮಾಡಿ ಮುಂದೆ ಮಾತಾಡೋಣ ಎಂದು ಹೇಳಿದ್ದಾರೆ. ಈ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಹ ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ಟಾಲಿನ್ ಸ್ನೇಹಕ್ಕಾಗಿ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡ್ತಿದ್ದಾರೆ: ಗೋವಿಂದ ಕಾರಜೋಳ
Web Stories