– ಸಿದ್ದರಾಮಯ್ಯನವರೇ ಎಲ್ಲಿ ಹೋಯ್ತು ನಿಮ್ಮ ಮಹಾ ಘಟಬಂಧನ್
ಬೆಂಗಳೂರು: ಬಿಜೆಪಿಯನ್ನು ಬಿಟ್ಟರೆ ಯಾವ ಪಕ್ಷಗಳಿಗೂ ರಾಜಕೀಯ ಸ್ಥಿರತೆ ಕಂಡುಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಈ ಬಾರಿಯ ಚುನಾವಣೆಯ ವಿಶೇಷ ಎಂಬಂತೆ ಬೆಂಗಳೂರಿನಲ್ಲಿ ಮಹಾ ಘಟಬಂದನ್ ಶುರು ಮಾಡಿದ್ದರು. ಆದರೆ ಅದು ಇಲ್ಲಿಗೆ ಸೀಮಿತವಾಯಿತು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ದೂರ ಇರಬೇಕೆಂದು ಜೆಡಿಎಸ್-ಕಾಂಗ್ರೆಸ್ ನಾಯಕರು ಒಂದಾದರು. ಆದರೆ ಈಗ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಉರುಳಿಸಲು ಶುರು ಮಾಡಿದ್ದಾರೆ. ಸಿದ್ದರಾಮಯ್ಯನವರೇ ಎಲ್ಲಿ ಹೋಯಿತು ನಿಮ್ಮ ಮಹಾ ಘಟಬಂಧನ್ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆ ರಾಜ್ಯದ ವಿಚಾರಗಳ ಮೇಲೆ ಚುನಾವಣೆ ನಡೆಯುವುದಿಲ್ಲ. ರಾಷ್ಟ್ರೀಯ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಅಂತ್ಯಗೊಳಿಸಲು ಜನ ತೀರ್ಮಾನಿಸಿದ್ದಾರೆ. ದೇಶದಲ್ಲಿ ಹತ್ತು ವರ್ಷಗಳ ಕಾಲ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಭ್ರಷ್ಟಾಚಾರಯುಕ್ತ ಸರ್ಕಾರವಿತ್ತು. ಆದರೆ ಈಗ ಭ್ರಷ್ಟಾಚಾರ ಮುಕ್ತ ಸರ್ಕಾರವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು 40,000 ಓಲಾ ಟ್ಯಾಕ್ಸಿಗಳ ಸೇವೆಯನ್ನು ಆರು ತಿಂಗಳ ಕಾಲ ರದ್ದು ಮಾಡಿದೆ. ಓಲಾ ಸಂಸ್ಥೆಯವರು ತಪ್ಪು ಮಾಡಿದ್ದರೆ ಅದರ ವಿರುದ್ಧ ಕಾನೂನು ಕ್ರಮ ಜರುಗಿಸಿ, ದಂಡ ವಿಧಿಸಿ. ಅದನ್ನು ಬಿಟ್ಟು ಓಲಾ ಕ್ಯಾಬ್ ಚಾಲಕರ ಹೊಟ್ಟೆ ಮೇಲೆ ಹೊಡೆಯಬೇಡಿ. ಚುನಾವಣೆ ಸಂದರ್ಭದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿರುವುದರ ಹಿಂದೆ ಬೇರೆಯ ಹುನ್ನಾರವೇ ಇದೆ ಎಂದು ದೂರಿದರು.
ಬಿಜೆಪಿ ಎರಡಂಕಿ ದಾಟಲು ಬಿಡಲ್ಲ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಅವರು ಇರುವುದೇ ಎರಡು. ಅದಕ್ಕಾಗಿ ಅವರಿಗೆ ಯಾವಾಗಲೂ ಎರಡಂಕಿಯ ಬಗ್ಗೆಯೇ ಚಿಂತೆ ಎಂದು ತಿರುಗೇಟು ಕೊಟ್ಟರು.
ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಸಚಿವರು, ನಾಳೆ ನನ್ನ ಮನೆ ಮೇಲೂ ದಾಳಿಯಾಗಬಹುದು. ಕುತಂತ್ರ ರಾಜಕಾರಣ ಸಲ್ಲದು. ಇಂತಹ ರಾಜಕಾರಣದ ಬಳಿಕ ನಾಯಕರು ತಬ್ಬಿಕೊಂಡು ಒಂದಾಗುತ್ತಾರೆ. ಆದರೆ ಪಕ್ಷದ ಕಾರ್ಯಕರ್ತರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.