– ಮಹಾರಾಷ್ಟ್ರ ಚುನಾವಣೆಯು ‘ಇಂಡಿಯಾ’-ಅಘಾಡಿ ದ್ವಂದ್ವ ಮುಖ ಬಯಲು ಮಾಡಿದೆ
– ಕಾಂಗ್ರೆಸ್‌ನ ನಗರ ನಕ್ಸಲಿಸಂ ಭಾರತಕ್ಕೆ ಹೊಸ ಸವಾಲಾಗಿದೆ
ನವದೆಹಲಿ: ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ ಎಂದು ಕರ್ನಾಟಕದ ವಕ್ಫ್ ವಿವಾದ ಉಲ್ಲೇಖಿಸಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರ ಜಯಭೇರಿ ಹಿನ್ನೆಲೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಉದಾಹರಣೆ ವಕ್ಫ್ ಬೋರ್ಡ್. ದೆಹಲಿಯ ಜನರು ಆಶ್ಚರ್ಯ ಪಡುತ್ತಾರೆ. 2014 ರಲ್ಲಿ ಸರ್ಕಾರವನ್ನು ತೊರೆಯುವ ಮೊದಲು, ಈ ಜನರು ದೆಹಲಿ ಮತ್ತು ಸುತ್ತಮುತ್ತಲಿನ ಅನೇಕ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರವಿಲ್ಲದೇ ಕಾಂಗ್ರೆಸ್ ಕುಟುಂಬ ಬದುಕಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಬಹುದು. ಇಂದು, ಕಾಂಗ್ರೆಸ್‌ನ ನಗರ ನಕ್ಸಲಿಸಂ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಅರ್ಬನ್ ನಕ್ಸಲೀಯರ ರಿಮೋಟ್ ಕಂಟ್ರೋಲ್ ದೇಶದ ಹೊರಗಿದ್ದು, ಈ ಅರ್ಬನ್ ನಕ್ಸಲಿಸಂ ಬಗ್ಗೆ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕಿದೆ. ಇಂದು ದೇಶದ ಯುವಜನತೆ, ಪ್ರತಿಯೊಬ್ಬರೂ ಕಾಂಗ್ರೆಸ್‌ನ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಮೋದಿ ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷ ಈಗ ದೇಶದ ರಾಜಕೀಯದಲ್ಲಿ ‘ಪರಜೀವಿ’ ಎನಿಸಿಕೊಂಡಿದೆ. ಸ್ವಂತವಾಗಿ ಗುಂಪು ಕಟ್ಟಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ಆಂಧ್ರಪ್ರದೇಶ, ಸಿಕ್ಕಿಂ, ಹರಿಯಾಣ ಮತ್ತು ಇಂದು ಮಹಾರಾಷ್ಟ್ರದಲ್ಲಿ ಅವರು ನಾಶವಾಗಿದ್ದಾರೆ. ಕಾಂಗ್ರೆಸ್ ಒಡೆದು ಆಳುವ ರಾಜಕಾರಣ ವಿಫಲವಾಗಿದೆ. ಆದರೆ, ಕಾಂಗ್ರೆಸ್‌ನ ದುರಹಂಕಾರ ನೋಡಿ. ಕಾಂಗ್ರೆಸ್ ತನ್ನ ದೋಣಿ ಮಾತ್ರವಲ್ಲದೆ ತನ್ನ ಮಿತ್ರಪಕ್ಷಗಳ ದೋಣಿಯನ್ನೂ ಮುಳುಗಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಾವು ಅದನ್ನೇ ನೋಡಿದ್ದೇವೆ ಎಂದು ಟಾಂಗ್ ಕೊಟ್ಟರು.
ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಹೇಗೆ ಜನರಿಗೆ ದ್ರೋಹ ಮಾಡುತ್ತಿದೆ ಎಂಬುದನ್ನು ಮಹಾರಾಷ್ಟ್ರದ ಜನರು ನೋಡಿದ್ದಾರೆ. ಇದನ್ನು ನೀವು ಪಂಜಾಬಿನಲ್ಲೂ ನೋಡುತ್ತೀರಿ. ಇಂದು ಮಹಾರಾಷ್ಟ್ರದ ಜನಾದೇಶದ ಮತ್ತೊಂದು ಸಂದೇಶವಿದೆ. ಇಡೀ ದೇಶದಲ್ಲಿ ಒಂದೇ ಒಂದು ಸಂವಿಧಾನ ಕೆಲಸ ಮಾಡುತ್ತದೆ. ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ಭಾರತದ ಸಂವಿಧಾನ. ದೇಶದಲ್ಲಿ ಎರಡು ಸಂವಿಧಾನಗಳ ಬಗ್ಗೆ ಯಾರೇ ಮಾತನಾಡಿದರೂ ದೇಶ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370 ನೇ ವಿಧಿಯ ಗೋಡೆಯನ್ನು ನಿರ್ಮಿಸಲು ಪ್ರಯತ್ನಿಸಿದವು. ಇದು ಕೆಲಸ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಅವರಿಗೆ ಸ್ಪಷ್ಟವಾಗಿ ಹೇಳಿದೆ. ಈಗ ವಿಶ್ವದ ಯಾವುದೇ ಶಕ್ತಿಯು 370 ನೇ ವಿಧಿಯನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ ಚುನಾವಣೆಯು ‘ಇಂಡಿಯಾ’-ಅಘಾಡಿಯ ದ್ವಂದ್ವ ಮುಖವನ್ನು ಬಯಲು ಮಾಡಿದೆ. ಕಾಂಗ್ರೆಸ್ ನಾಯಕತ್ವವು ದೇಶಾದ್ಯಂತ ವೀರ ಸಾವರ್ಕರ್ ಅವರನ್ನು ನಿರಂತರವಾಗಿ ಅವಮಾನಿಸಿದೆ. ಮಹಾರಾಷ್ಟ್ರದಲ್ಲಿ ಮತ ಪಡೆಯಲು, ಈ ಜನರು ಅವರನ್ನು ನಿಂದಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಆದರೆ ಅವರು ಸಾವರ್ಕರ್ ಅವರ ತ್ಯಾಗದ ಬಗ್ಗೆ ಒಮ್ಮೆಯೂ ಸತ್ಯವನ್ನು ಮಾತನಾಡಿಲ್ಲ. ಇದು ಅವರ ಎರಡು ಮುಖವನ್ನು ತೋರಿಸುತ್ತದೆ. ವೀರ ಸಾವರ್ಕರ್ ಅವರ ಮಾನಹಾನಿ ಮಾಡುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಎಂವಿಎ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.
ಈ ಬಾರಿ ಮಹಾರಾಷ್ಟ್ರ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ 50 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಕೂಟಕ್ಕೆ ದೊರೆತ ಅತಿ ದೊಡ್ಡ ಗೆಲುವು ಇದಾಗಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮಹಾರಾಷ್ಟ್ರವು ಸತತ ಮೂರನೇ ಬಾರಿ ಆಶೀರ್ವಾದ ಮಾಡಿದೆ. ಮಹಾರಾಷ್ಟ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ. ಬಿಜೆಪಿಗೆ ಸತತ ಮೂರು ಬಾರಿ ಜನಾದೇಶ ನೀಡಿದ ದೇಶದ ಆರನೇ ರಾಜ್ಯ ಮಹಾರಾಷ್ಟ್ರ ಎಂದು ಮೋದಿ ಬಣ್ಣಿಸಿದರು.