ಬೆಂಗಳೂರು: ಪ್ರಯಾಗ್‌ರಾಜ್ (Prayagraj) ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ದುರಂತದಲ್ಲಿ (Maha Kumbh Stampede) ಕರ್ನಾಟಕದವರಿಗೆ ಏನಾದರೂ ಪ್ರಾಣಾಪಾಯ ಆಗಿದೆಯೇ ಎಂದು ಉತ್ತರ ಪ್ರದೇಶ (Uttar Pradesh) ಸರ್ಕಾರದ ಮಾಹಿತಿ ಕೇಳಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಉತ್ತರ ಪ್ರದೇಶದ ಸರ್ಕಾರದ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕಂದಾಯ ಇಲಾಖೆಯ ಎಸಿಎಸ್ ರಶ್ಮಿಯವರು ಈಗಾಗಲೇ ಯುಪಿ ಸರ್ಕಾರದ ಜೊತೆ ಮಾತನಾಡಿದ್ದಾರೆ. ಒಂದಿಬ್ಬರಿಗೆ ಗಾಯ ಆಗಿದೆ ಎಂಬ ಮಾಹಿತಿ ಇದೆ. ಯುಪಿ ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುಪಿ ಸರ್ಕಾರದಿಂದ ಅಧಿಕೃತ ಮಾಹಿತಿಗೆ ಎದುರು ನೋಡುತ್ತಿದ್ದೇವೆ. ಕನ್ನಡಿಗರಿಗೆ ಏನಾದರೂ ತೊಂದರೆ ಆಗಿರುವ ಮಾಹಿತಿ ಬಂದರೆ, ಅವಶ್ಯಕತೆ ಇದ್ದರೆ ಅಧಿಕಾರಿಗಳ ತಂಡವನ್ನ ಪ್ರಯಾಗ್‌ರಾಜ್‌ಗೆ ಕಳುಹಿಸುತ್ತೇವೆ. ನಮ್ಮಲ್ಲೂ ವಿಪತ್ತು ನಿರ್ವಹಣಾ ಸೆಲ್ ಇದೆ. ಮಾನಿಟರ್ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.