ಗದಗ: ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭ ಮಾಡಿ ಎಂದರೆ ಸರ್ಕಾರ ಈಗ ಶಾಸಕರನ್ನು (MLA) ಖರೀದಿ ಮಾಡಲು ಖರೀದಿ ಕೇಂದ್ರ ತೆರೆದಿದೆ ಎಂದು ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar)ಸಿಟ್ಟು ಹೊರಹಾಕಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬೊಬ್ಬ ಶಾಸಕರಿಗೆ 50 ರಿಂದ 60 ಕೋಟಿ ರೂ. ಹಣ ಕೊಟ್ಟಿದ್ದಾರಂತೆ. ಮುಂದೆ ಇನ್ನೂ ಕೊಡ್ತಾರೆ ಅಂತ ಹೇಳಿ ಖರೀದಿ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ಖರೀದಿ ಮಾಡಲು ಖರೀದಿ ಕೇಂದ್ರ ಆರಂಭ ಮಾಡಿದ್ದಾರೆ ವಿನಾ: ರೈತರು ಬೆಳೆದ ಬೆಳೆಗೆ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಐದಾರು ಜನರ ಗುಟ್ಟಿನ ವ್ಯಾಪಾರ, ಬಹಿರಂಗವಾಗಿ ಚರ್ಚಿಸಲ್ಲ: ಡಿಕೆಶಿ
ರೈತರ ಬೆಳೆ (Crop) ಖರೀದಿ ಮಾಡಲು ನಿಮ್ಮಲ್ಲಿ ಹಣವಿಲ್ಲ. ಆದರೆ ಶಾಸಕರನ್ನು ಖರೀದಿ ಮಾಡಲು ನಿಮ್ಮಲ್ಲಿ ಹಣವಿದೆ. ಯಾವ ಪುರುಷಾರ್ಥಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಪಡೆಯಲು ಎರಡು ಕಡೆಯಿಂದ ಖರೀದಿ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಶಾಸಕರು ಲಕ್ಕಿ ಪರ್ಸನ್. ಕಾಂಗ್ರೆಸ್ ಶಾಸಕರು ಉದ್ದಾರ ಆಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ. ರಾಜ್ಯದ ಜನ ಸಾಮಾನ್ಯರ, ರೈತರ ಸಮಸ್ಯೆ ಕೇಳಲಾರದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದರು
ಈ ಸರ್ಕಾರ ರಾಜ್ಯದಿಂದ ತೊಲಗಬೇಕು. ಇದಕ್ಕಾಗಿ ಬಿಜೆಪಿಯಿಂದ 27 ಹಾಗೂ 28 ರಂದು ಎರಡು ದಿನ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ. ಸರ್ಕಾರ ಜನ ವಿರೋಧಿ ರೈತ ವಿರೋಧಿ ಧೋರಣೆ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

