ಲೂಸ್ ಮಾದ ಖ್ಯಾತಿಯ ಯೋಗಿ ಮತ್ತೊಂದು ಬಾರಿ ಸಿಂದ್ಲಿಂಗು ಜೊತೆ ಅಭಿಮಾನಿಗಳ ಎದುರು ನಿಂತಿದ್ದಾರೆ. ಬರೋಬ್ಬರಿ ಹನ್ನೆರಡು ವರ್ಷಗಳ ಹಿಂದೆ ಸಿಂದ್ಲಿಂಗು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯೋಗಿ, ಈಗ ಮತ್ತೆ ಸಿದ್ಲಿಂಗು 2 ಮೂಲಕ ರಂಜಿಸಲು ಸಜ್ಜಾಗುತ್ತಿದ್ದಾರೆ. ಆ ಸಿದ್ಲಿಂಗು ಚಿತ್ರದಲ್ಲಿ ಅಲ್ಲಲ್ಲಿ ಡಬಲ್ ಮೀನಿಂಗ್ ಇದ್ದರೂ, ಈ ಸಿದ್ಲಿಂಗು ಹಾಗೆ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ಪ್ರಾಮೀಸ್ ಮಾಡಿದ್ದಾರೆ.
ಕನ್ನಡದ ಪ್ರತಿಭಾವಂತ ನಿರ್ದೇಶಕ ವಿಜಯ್ ಪ್ರಸಾದ್ ಮತ್ತೊಂದು ಸಿದ್ಲಿಂಗು ಕಥೆ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ (Yogi) ಮತ್ತು ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದರು ವಿಜಯ್ ಪ್ರಸಾದ್. ಇದೀಗ ರಮ್ಯಾ ಬದಲು ಸೋನು ಗೌಡ (Sonu Gowda) ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಸಿದ್ಲಿಂಗು 2 (Sidlingu 2) ಚಿತ್ರದ ಕಥೆ ಹೇಳುತ್ತಿದ್ದಾರೆ.
ಮೊನ್ನೆಯಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಸಿಂಪಲ್ ಆಗಿ ಆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲವಿದೆ.
2012ರಲ್ಲಿ ಸಿದ್ಲಿಂಗು ತೆರೆಗೆ ಬಂದಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಕೂಡ ಗೆದ್ದಿತ್ತು. ಮತ್ತೆ ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ (Vijay Prasad) ದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏನೆಲ್ಲ ವಿಷಯಗಳನ್ನು ಈ ಚಿತ್ರ ಹೊತ್ತು ತರಲಿದೆ ಎನ್ನುವುದನ್ನು ಕಾದು ನೋಡಬೇಕು.