ಜಮ್ಮು ಕಾಶ್ಮೀರದಲ್ಲಿ ಸೂಕ್ಷ್ಮ ಪರಿಸ್ಥಿತಿಯಿದೆ, ಸುಧಾರಿಸಲು ಕೆಲ ಸಮಯ ಬೇಕಿದೆ- ಸುಪ್ರೀಂ

Public TV
2 Min Read
supreme court

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಿದೆ. ಒಂದು ರಾತ್ರಿಯ ಒಳಗಡೆ ಪರಿಸ್ಥಿತಿ ಬದಲಾಗಲು ಸಾಧ್ಯವಿಲ್ಲ. ಸರ್ಕಾರವನ್ನು ಅವಲಂಬಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾಮಾಜಿಕ ಕಾಯಕರ್ತ ತೆಹ್ಸಿನ್ ಪೂನವಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿದೆ. ಅಷ್ಟೇ ಅಲ್ಲದೇ ಅನಿರ್ಧಿಷ್ಟವಧಿಗೆ ನಿಷೇಧಾಜ್ಞೆ ಜಾರಿಯಾಗಿದೆ. ಗೃಹ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆಗೊಳಿಸಿ ನಿಷೇಧಾಜ್ಞೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದರು.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಎಂಆರ್ ಶಾ, ಅಜಯ್ ರಸ್ತೋಗಿ ಅವರಿದ್ದ ತ್ರಿ ಸದಸ್ಯ ಪೀಠ ಪರಿಸ್ಥಿತಿ ಸರಿಯಾಗಲು ಕೆಲ ಸಮಯ ಬೇಕು ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಎರಡು ವಾರ ಮುಂದಕ್ಕೆ ಹಾಕಿತು.

ಎಷ್ಟು ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಯುತ್ತದೆ ಎಂದು ಕೋರ್ಟ್ ಕೇಳಿದ ಪ್ರಶ್ನೆಗೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ನಿಷೇಧಾಜ್ಞೆ ಜಾರಿಯಾದ ಬಳಿಕ ಭದ್ರತಾ ಸಿಬ್ಬಂದಿಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ. 2016 ರಲ್ಲಿ ಕಾಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲು 3 ತಿಂಗಳು ಸಮಯ ಹಿಡಿದಿತ್ತು. ಈ ಸಂದರ್ಭದಲ್ಲಿ 47 ಮಂದಿ ಮೃತಪಟ್ಟಿದ್ದರು. ಈಗ ಹಂತ ಹಂತವಾಗಿ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಉತ್ತರಿಸಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಅಹಿತಹಕರ ಘಟನೆ ನಡೆಯದ ಮಾಹಿತಿಯನ್ನು ಪಡೆದುಕೊಂಡು ಒಂದೊಂದೆ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಹಿಂತೆಗದುಕೊಳ್ಳಲಾಗುತ್ತಿದೆ ಎನ್ನುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.

jammu kashmir

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮನೇಕಾ ಗುರುಸ್ವಾಮಿ, ಕಾಶ್ಮೀರದ ಎಲ್ಲ ಭಾಗದಲ್ಲಿ ಮೊಬೈಲ್, ಇಂಟರ್‌ನೆಟ್ ಸ್ಥಗಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ನ್ಯಾ. ಮಿಶ್ರಾ ಅಲ್ಲಿ ಗಂಭೀರವಾದ ಸಮಸ್ಯೆಯಿದೆ. ಒಂದು ವೇಳೆ ತೆರವುಗೊಳಿಸಿದರೆ ಕಾನೂನು ಸುವ್ಯವಸ್ಥೆ ಧಕ್ಕೆ ಬರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆಸ್ಪತ್ರೆ, ಶಾಲೆ ಮತ್ತು ಪೊಲೀಸ್ ಠಾಣೆಗಳನ್ನು ಕಾರ್ಯನಿರ್ವಹಿಸಲು ಅನುಮತಿ ನೀಡಲು ಆದೇಶಿಸಿ ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.ಇದಕ್ಕೆ ನ್ಯಾ. ಮಿಶ್ರಾ, ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರಕ್ಕೆ ಕೆಲ ಸಮಯವನ್ನು ನೀಡಬೇಕು ಎಂದು ಹೇಳಿದರು.

srinagar kashmir

ಕಾಶ್ಮೀರ ಜನತೆಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳುವ ಸರ್ಕಾರ ನಿರ್ಬಂಧ ಹೇರಿದ್ದು ಹೇರಿದ್ದು ಎಷ್ಟು ಸರಿ? ಸಂಪೂರ್ಣವಾಗಿ ನಿರ್ಬಂಧ ಹೇರಿದ್ದು ಸರಿಯಲ್ಲ ಎಂದು ಮನೇಕಾ ಗುರುಸ್ವಾಮಿ ವಾದಿಸಿದರು. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಎರಡು ವಾರಗಳ ಮುಂದಕ್ಕೆ ಹಾಕಿತು.

Share This Article
Leave a Comment

Leave a Reply

Your email address will not be published. Required fields are marked *