ಬೆಳಗಾವಿ: ಇವತ್ತು ಕೋರ್ಟ್ ನನಗೆ ಧಾರವಾಡ (Dharwad) ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಹೊರಗಡೆ ಇದ್ದುಕೊಂಡೇ ನಾನು ಚುನಾವಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಹೇಳಿದರು.
ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನಲ್ಲಿ ಮನೆ ಮಾಡಿಕೊಂಡು ಇರುವ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿನಯ್ ಕುಲಕರ್ಣಿ, ಕ್ಷೇತ್ರದ ಜನ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮರಳಿ ನನಗೆ ಅವಕಾಶ ಕೊಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ನನ್ನ ಮೇಲೆ ಬಿಜೆಪಿ (BJP) ಷಡ್ಯಂತ್ರ ನಡೆಸಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಏಕೆಂದರೆ ಕೋರ್ಟ್‌ನಲ್ಲಿ ಯರ‍್ಯಾರು ಬಂದು ಕುಳಿತಿರುತ್ತಾರೆ ಎಂಬುದನ್ನು ನೀವು ನೋಡಿದರೆ ನಿಮಗೇ ಗೊತ್ತಾಗುತ್ತದೆ. ನಾನು ಅಷ್ಟೇ ಅಲ್ಲ ರಾಜ್ಯದ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿದೆ. ಇಂದಿಗೂ ಅನೇಕರ ಮೇಲೆ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಪಿಎ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಅವರು ಹೊರಗಡೆ ಬರದಂತೆ ಮಾಡಿದರು ಎಂದು ಆರೋಪಿಸಿದರು.
ನನ್ನ ಅವಧಿಯಲ್ಲಿ ಆದಂತಹ ಕೆಲಸಗಳನ್ನು ಮುಂದಿಟ್ಟುಕೊಂಡು ನನ್ನ ಪತ್ನಿ ಹಾಗೂ ಕಾರ್ಯಕರ್ತರು ಮತ ಕೇಳುತ್ತಿದ್ದಾರೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ನಾವು ಕೊಟ್ಟಂತಹ ಯೋಜನೆಗಳು ಇಂದು ನನ್ನ ಕೈ ಹಿಡಿಯುತ್ತಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನೇ ಮಾಡಿಲ್ಲ. ಒಂದೂ ಜನಸಂಪರ್ಕ ಸಭೆ ನಡೆಸಿಲ್ಲ. ಕಾಂಗ್ರೆಸ್‌ಗೆ ಬೆಂಬಲ ನೀಡಿದಂತಹವರಿಗೆ ಕಿರುಕುಳ ನೀಡುವ ಕೆಲಸ ಮಾಡಿದ್ದಾರೆ. 1 ಲಕ್ಷ ರೂ. ಕೊಟ್ಟವರಿಗೆ ಮಾತ್ರ ಮನೆ ಹಾಕಿಸಿಕೊಟ್ಟಿದ್ದಾರೆ ಎಂದರು.
ವಿನಯ್ ಕುಲಕರ್ಣಿ ಯಾರು ಎಂಬುದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಬಿಜೆಪಿಯವರು ಹಾಲಿನಲ್ಲಿ ಹರಳು ಒಗೆಯುವ ಕೆಲಸ ಮಾಡಿದ್ದಾರೆ. ಇಂದು ಕ್ಷೇತ್ರದಲ್ಲಿ ನನ್ನ ಪತ್ನಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಎಲ್ಲರೂ ಆಕೆಯನ್ನು ಮನೆಯ ಮಗಳಂತೆ ಕಾಣುತ್ತಿದ್ದಾರೆ. ನಾನು ಜಿಲ್ಲೆಯ ಹೊರಗಿದ್ದರೂ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಪರ ಅಲೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್ ಹೇಳಿಕೆ – ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು
ಈಗಿನ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರವೂ ಮಾಡಿಲ್ಲ. ನಾನು ಮಾಡಿದ ಕೆರೆಗೆ ನೀರು ತುಂಬಿಸುವ ಕೆಲಸ, ಮಂದಿರ ನಿರ್ಮಾಣ ಸೇರಿದಂತೆ ಇತ್ಯಾದಿ ಕೆಲಸಗಳಿಗೆ ಬಿಜೆಪಿ ಶಾಸಕರು ತಮ್ಮ ಹೆಸರು ಹಾಕಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಯಾವುದೇ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಸಿದ್ದರಾಮಯ್ಯ ಒಬ್ಬರು ನನ್ನ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದಾರೆ. ದುಂದುವೆಚ್ಚ ಮಾಡುವವನು ನಾನಲ್ಲ ಎಂದರು.
ಸುದೀಪ್ ಅವರು ಕರೆಕ್ಟ್ ಆಗಿಯೇ ಹೇಳಿದ್ದಾರೆ. ಅಭಿವೃದ್ಧಿ ಯಾರು ಮಾಡುತ್ತಾರೋ ಅವರಿಗೆ ಮತ ಹಾಕಿ ಎಂದಿದ್ದಾರೆ. ಅದು ಕರೆಕ್ಟ್ ಆಗಿಯೇ ಇದೆ. ಇಂದಿಗೂ ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ನಾವು ಏನಾದರೂ ಮಾತನಾಡಿದರೆ ಅದು 10 ನಿಮಿಷಕ್ಕೆ ಬಿಜೆಪಿಯವರಿಗೆ ಮಾಹಿತಿ ಮುಟ್ಟುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಅವಶ್ಯವಿದೆ. ಈ ಬಾರಿ ನಾವು 146 ಸೀಟುಗಳನ್ನು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ: ಜಗದೀಶ್ ಶೆಟ್ಟರ್ ಗುಡುಗು