ಬೆಂಗಳೂರು: ಭಿಕ್ಷಾಟನೆ ಮಾಫಿಯಾ ಬೆಂಗಳೂರಿನಲ್ಲಿ (Bengaluru) ನಡೆಯುತ್ತಿದೆ. ಈ ಮಾಫಿಯಾ (Begging Mafia) ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಡಾ.ಕೆ.ಗೋವಿಂದರಾಜು(K Govindaraj) ಸರ್ಕಾರವನ್ನು ಆಗ್ರಹ ಮಾಡಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕಾಯ್ದೆ ಬಂದು 50 ವರ್ಷ ಆದರೂ ರಾಜ್ಯದಲ್ಲಿ ಭಿಕ್ಷಾಟನೆ ನಿಂತಿಲ್ಲ. ಬೆಂಗಳೂರಿನ ಮಾರ್ಕೆಟ್, ಎಂಜಿ ರೋಡ್ ಸೇರಿ ಹಲವು ಕಡೆ ಭಿಕ್ಷಾಟನೆ ಜಾಸ್ತಿಯಿದೆ. ಭಿಕ್ಷಾಟನೆ ಹಿಂದೆ ದೊಡ್ಡ ಮಾಫಿಯಾ ಇದ್ದು ಏಜೆಂಟ್ ಒಬ್ಬ ಕರೆದುಕೊಂಡು ಬಂದು ಬಿಟ್ಟು ಹೋಗಿ ಭಿಕ್ಷಾಟನೆ ಮಾಡಿಸ್ತಾನೆ. ಚಿಕ್ಕ ಮಕ್ಕಳನ್ನ ಕರೆದುಕೊಂಡು ಭಿಕ್ಷಾಟನೆ ಮಾಡುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವ ಮಹದೇವಪ್ಪ ಉತ್ತರ ನೀಡಿ, ಭಿಕ್ಷಾಟನೆಗೆ ಮಾಫಿಯಾ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. 16 ವರ್ಷ ಒಳಗೆ ಯಾರಾದರೂ ಭಿಕ್ಷಾಟನೆ ಮಾಡಿದರೆ ಅವರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಮಾಹಿತಿ ಇದ್ದರೆ ಮಾಹಿತಿ ನೀಡಬಹುದು. ಭಿಕ್ಷಾಟನೆಗೆ ಮಾಫಿಯಾ ಇದ್ದರೆ ಪೊಲೀಸ್ ಇಲಾಖೆಗೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.

