ಭಾರತ ಮತ್ತು ಪಾಕಿಸ್ತಾನ (India And Pakistan) ನಡುವಿನ ರಾಜಕೀಯ ಸಂಬಂಧಗಳು ಎಷ್ಟೇ ಕಹಿಯಾಗಿದ್ದರೂ ಉಭಯ ದೇಶದ ಕೆಲ ನಾಗರಿಕರ ನಡುವಿನ ಸಂಬಂಧ ಗಟ್ಟಿಯಾಗಿವೆ. ಅದರಲ್ಲೂ ಕೆಲ ಮುಸ್ಲಿಂ ಕುಟುಂಬಗಳ ನಡುವಿನ ವಿವಾಹ ಸಂಬಂಧಗಳು ಸಾಮಾನ್ಯವಾಗಿವೆ. ಆದ್ರೆ ಪಹಲ್ಗಾಮ್ ದಾಳಿಯ ಬಳಿಕ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯುವಂತೆ ಭಾರತ ಕಟ್ಟಾಜ್ಞೆ ಹೊರಡಿಸಿದ್ದು, ಬಹಳಷ್ಟು ಜನರನ್ನ ಈಗಾಗಲೇ ಗಡಿಯಿಂದ ಕಳುಹಿಸಲಾಗಿದೆ. ಈ ನಡುವೆ ಉಭಯ ರಾಷ್ಟ್ರಗಳ ನಡುವಿನ ವಿವಾಹ ಸಂಬಂಧಗಳು ಏಕೆ ಇಷ್ಟೊಂದು ಗಟ್ಟಿಯಾಗಿದ್ದವು ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ, ಇದಕ್ಕೆ ಉತ್ತರವೂ ಇಲ್ಲಿದೆ.
ಜನರಿಗೆ ಯಾವುದೇ ಧರ್ಮ, ಲಿಂಗ ಅಥವಾ ದೇಶದಲ್ಲಿ ಮದುವೆಯಾಗಬೇಕೆಂಬುದು ವೈಯಕ್ತಿಕ ವಿಷಯವಾದರೂ, ಶತ್ರು ರಾಷ್ಟ್ರಗಳ ಜೊತೆಗಿನ ಸಂಬಂಧಗಳಿಂದ ದೂರ ಉಳಿಯುತ್ತಾರೆ. ಆದ್ರೆ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ವಿಭಿನ್ನವಾಗಿದೆ. ದೇಶ ವಿಭಜನೆಯ ನಂತರವೂ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಲೇ ಇದ್ದವು. ಇದರ ನಡುವೆ ವಿವಾಹಗಳೂ ನಡೆಯುತ್ತಿದ್ದವು, ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಈ ಸಂಬಂಧದ ಚಿತ್ರಣಗಳು ಸ್ಪಷ್ಟವಾಗಿ ಗೋಚರಿಸಿವೆ.
ಹೌದು. 2 ರಾಷ್ಟ್ರಗಳ ನಡುವಿನ ವಿವಾಹ ಸಂಬಂಧಗಳ ಬಗ್ಗೆ ನಿಖರ ಮಾಹಿತಿ ಇಲ್ಲ. ಆದಾಗ್ಯೂ ಪ್ರತಿವರ್ಷ ನೂರಾರು ಮಂದಿ ಪಾಕ್ ಪ್ರಜೆಗಳನ್ನ ಅಥವಾ ಪಾಕ್ ಪ್ರಜೆಗಳು ಭಾರತೀಯರನ್ನ ವಿವಾಹವಾಗಿರುವುದು ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ರಾಜಸ್ಥಾನ್, ಪಂಜಾಬ್ ಮತ್ತು ಗುಜರಾತ್ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ನಡೆದಿವೆ. ವಿಶೇಷವಾಗಿ ರಾಜಸ್ಥಾನದ ಪಶ್ಚಿಮ ಭಾಗದ ಜೈಸಲ್ಮೇರ್ ಮತ್ತು ಬಾರ್ಮೇರ್‌ನಲ್ಲಿ ಪ್ರತಿ ವರ್ಷ ಸುಮಾರು 200 ಗಡಿಯಾಚೆಗಿನ ಸಂಬಂಧಗಳು ನಡೆಯುತ್ತಿವೆ. ಗುಜರಾತ್‌ನ ಪಾಕಿಸ್ತಾನದ ಗಡಿಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.
ಗಡಿ ಪ್ರೀತಿಗೆ ವೇದಿಕೆಯಾದ ಸೋಷಿಯಲ್ ಮೀಡಿಯಾ
ಇದರ ಹಿಂದೆ ಕೆಲ ಸಾಮಾಜಿಕ ಕಾರಣಗಳೂ ಇವೆ. ಏಕೆಂದ್ರೆ ದೇಶ ವಿಭಜನೆಗೂ ಮೊದಲು ಈಗಿನ ಗಢಿ ಭಾಗಗಳಲ್ಲಿ ಅನೇಕ ಕುಟುಂಬಗಳೂ ಒಂದೇ ಹಳ್ಳಿ, ಪಟ್ಟಣಗಳಲ್ಲಿ ವಾಸಿಸುತ್ತಿದ್ದವು. 1947ರ ನಂತರ ಇವೆಲ್ಲವು ಬೇರ್ಪಪಟ್ಟವು, ಆದ್ರೆ ಎರಡೂ ಕಡೆಗಳಲ್ಲಿ ವೈವಾಹಿಕ ಸಂಬಂಧ ಗಟ್ಟಿಯಾಗಿ ಉಳಿದುಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪರಿಚಿತವಾದ ಜೋಡಿಗಳೂ ಸಹ ಸಂಪರ್ಕ ಸಾಧಿಸಿ, ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಸೀಮಾ ಹೈದರ್, ಭಾರತದದಿಂದ ಪಾಕ್‌ಗೆ ತೆರಳಿದ ಅಂಜು ಮಹಿಳೆಯರ ಕಥೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಪೌರತ್ವ ಪಡೆಯುವ ಮುನ್ನ…
ಇನ್ನೂ ಪಾಕಿಸ್ತಾನಿ ಪ್ರಜೆಯೊಬ್ಬರು ಭಾರತೀಯರನ್ನು ಮದುವೆಯಾದ್ರೆ ಅವರಿಗೆ ಇಲ್ಲಿಯೇ ಉಳಿಯಲು ವಿಶೇಷ ವೀಸಾ ಸಿಗುತ್ತದೆ. ಆದ್ರೆ ಈ ಪ್ರಕ್ರಿಯೆಯು ಸುಲಭವಲ್ಲ ಮೊದಲನೆಯದ್ದಾಗಿ ಎಕ್ಸ್ ವೀಸಾ ನೀಡಲಾಗುತ್ತದೆ. ಇದು 6 ತಿಂಗಳಿಂದ 1 ವರ್ಷದ ವರೆಗೆ ಅಸ್ತಿತ್ವದಲ್ಲಿರುತ್ತದೆ. ಬಳಿಕ ಆ ಪ್ರಜೆ ಭಾರತದ ಪೌರತ್ವ ಪಡೆಯುವವರೆಗೂ ನವೀಕರಣಗೊಳ್ಳುತ್ತಲೇ ಇರುತ್ತದೆ. ಈ ಎಕ್ಸ್ ವೀಸಾಗೆ ವಿವಾಹ ನೋಂದಣಿ ಕೂಡ ಅಗತ್ಯ. ಪೊಲೀಸರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ವೀಸಾ ನೀಡುತ್ತಾರೆ. ಇದಲ್ಲದೇ ಪಾಕಿಸ್ತಾನಿ ಪ್ರಜೆ ಹಿಂದೂ, ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್ ಅಥವಾ ಪಾರ್ಸಿ ಸಮುದಾಯಕ್ಕೆ ಸೇರಿದಾಗ, ದೀರ್ಘಾವಧಿಯ ವೀಸಾ (LTV) ಸಹ ಲಭ್ಯವಿದೆ. ಇದು ದೀರ್ಘಕಾಲದವರೆಗೆ ನಡೆಯುತ್ತದೆ ಮತ್ತು ಪೌರತ್ವ ಪಡೆಯುವ ಪ್ರಕ್ರಿಯೆಯ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ.
ಪೌರತ್ವ ಪಡೆಯಲು ಷರತ್ತುಗಳೇನು?
ಮದುವೆ ನಂತರ ಪಾಕ್ ಪ್ರಜೆಯು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬೇಕಾದ್ರೆ ಕೆಲ ಷರತ್ತುಗಳೂ ಇವೆ. ಆತ ಕನಿಷ್ಠ 7 ವರ್ಷಗಳ ಕಾಲ ದೇಶವಾಸಿಯಾಗಿರಬೇಕು. ಅಲ್ಲಿಯವರೆಗೆ ಭಾರತೀಯರನ್ನು ವರಿಸಿದ ಪಾಕ್ ಪ್ರಜೆಗೆ ತನ್ನ ಪತಿ ಮತ್ತವರ ಕುಟುಂಬಸ್ಥರು ಇರುವ ನಗರಕ್ಕೆ ಸೀಮಿತವಾಗಿ ವೀಸಾ ಸಿಗುತ್ತದೆ. ಬೇರೆ ನಗರ ಪ್ರವೇಶಿಸಬೇಕಾದ್ರೆ ಅವರು ಪೊಲೀಸರಿಂದ ಅನುಮತಿ ಪಡೆಯಬೇಕು.
ಪಾಕಿಸ್ತಾನಿಯರ ಮೇಲೆ ಅನುಮಾನ ಇದ್ದೇ ಇತ್ತು:
ವಿವಾಹ ಸಂಬಂಧ ಹೊಂದಿದ್ದ ಹೊರತಾಗಿಯೂ ಪಾಕಿಸ್ತಾನಿಯರ ಮೇಲೆ ಭಾರತೀಯ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಏಕೆಂದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹನಿಟ್ರ್ಯಾಪ್ ಅಥವಾ ನಕಲಿ ವಿವಾಹಗಳ ಮೂಲಕ ಮಿಲಿಟರಿ ಮತ್ತು ದೇಶದ ಭದ್ರತಾ ಮಾಹಿತಿಗಳನ್ನು ಕದಿಯಲು ಪ್ರಯತ್ನಿಸುತ್ತಿತ್ತು. ಭಾರತೀಯ ಪುರುಷರನ್ನು ವರಿಸಿದ್ದ ಪಾಕಿಸ್ತಾನಿ ಮಹಿಳೆಯರು ಬೇಹುಗಾರಿಕೆ ನಡೆಸಲು ಶುರು ಮಾಡಿದ್ದರು, ಪಂಜಾಬ್ ಮತ್ತು ರಾಜಸ್ಥಾನ ಗಡಿಯಲ್ಲಿ ಇಂತಹ ಅನೇಕ ಪ್ರಕರಣಗಳು ಕಂಡುಬಂದಿವೆ, ಹೀಗಾಗಿ RAw ಮತ್ತು ಮಿಲಿಟರಿ ಸದಾ ಅವರ ಮೇಲೆ ಒಂದು ಕಣ್ಣಿಟ್ಟಿರುತ್ತದೆ.
ಹಲವು ವೀಸಾಗಳಿಗೆ ನಿಬಂಧನೆ:
ಮದುವೆ ಸಂಬಂಧಗಳ ಹೊರತಾಗಿಯೂ ಪಾಕಿಸ್ತಾನದ ಹಲವು ಜನರು ಭಾರತಕ್ಕೆ ಬರುತ್ತಲೇ ಇದ್ದರು. ಹಲವು ವೀಸಾಗಳಿಗೆ ನಿಬಂಧನೆಗಳನ್ನು ವಿಧಿಸಲಾಗಿದೆ.
* ಪಾಕ್‌ನಿಂದ ಬಂಧವರಿಗೆ ಪ್ರವಾಸಿ ವೀಸಾ ಇರುವುದಿಲ್ಲ, ಸಂದರ್ಶಕರ ವೀಸಾದಲ್ಲಿ ಬರಬಹುದು. ಸಂದರ್ಶಕರು ತಮ್ಮ ಸಂಬಂಧಿಕರ ವಿಳಾಸ ಮತ್ತು ಇತರ ದಾಖಲೆಗಳನ್ನ ಒದಗಿಸಬೇಕಾಗುತ್ತದೆ.
* ದೀರ್ಘಾವಧಿಯ ವೀಸಾವು ಭಾರತೀಯ ಪೌರತ್ವವನ್ನು ಬಯಸುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಮಾತ್ರ ನೀಡಲಾಗುತ್ತದೆ.
* ಪತ್ರಕರ್ತರು ಅಥವಾ ಸಂಶೋಧಕರಿಗೆ ವ್ಯಾಪಾರ ವೀಸಾ, ವಿದ್ಯಾರ್ಥಿ ವೀಸಾ ಮತ್ತು ವಿವಿಧ ರೀತಿಯ ವೀಸಾಗಳನ್ನ ಪಡೆಯುವ ಅವಕಾಶ ಇರಲಿದೆ. ಇದರ ಹೊರತಾಗಿ ವೈದ್ಯಕೀಯ ಸೌಲಭ್ಯ ಪಡೆಯುವವರಿಗೆ ಮೆಡಿಕಲ್ ವೀಸಾ ಲಭ್ಯವಿರುತ್ತದೆ.
ಅದೇ ರೀತಿ ಭಾರತೀಯ ನಾಗರಿಕರೂ ಪಾಕಿಸ್ತಾನಕ್ಕೆ ಹೋಗಲು ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವ ನಗರಗಳಿಗೆ ಭೇಟಿ ನೀಡಲಿದ್ದಾರೆ? ಎಲ್ಲಿ ವಾಸ್ತವ್ಯ? ಎಲ್ಲಾ ಪೂರ್ಣ ವಿಳಾಸವನ್ನು ನೀಡಬೇಕಾಗುತ್ತದೆ. ಸದ್ಯ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಎಲ್ಲ ರಾಜತಾಂತ್ರಿಕ ಸಂಬಂಧಗಳು ಸ್ತಬ್ಧವಾಗಿದೆ. ಮುಂದಿನ ಬೆಳವಣಿಗೆಯನ್ನ ಕಾದುನೋಡಬೇಕಿದೆ.