ರಾಜಕೀಯದಲ್ಲಿ ಎರಡು ಆಟಗಳಿವೆ, ನಾನು ಎಲ್ಲವನ್ನು ಹೇಳಲ್ಲ: ಡಿಕೆಶಿ

Public TV
2 Min Read
DKSHI

– ಆಪರೇಷನ್ ಕಮಲಕ್ಕೆ ಬಿಗ್ ಟ್ವಿಸ್ಟ್ ನೀಡಿದ ಟ್ರಬಲ್ ಶೂಟರ್

ಬೆಂಗಳೂರು: ರಾಜಕೀಯದಲ್ಲಿ ಎರಡು ಆಟಗಳಿರುತ್ತವೆ. ಎಲ್ಲವನ್ನು ಮಾಧ್ಯಮಗಳ ಮುಂದೆ ಹೇಳೋದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷದ ಯಾವ ಶಾಸಕರು ಬಿಜೆಪಿ ಸೇರ್ಪಡೆ ಆಗಲ್ಲ. ನಮ್ಮವರನ್ನು ಎಲ್ಲಿಯೇ ಕೂಡಿ ಹಾಕಿದ್ರು ಅವರನ್ನು ಕರೆತರುವ ಶಕ್ತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಹೇಳುವ ಮೂಲಕ ಆಪರೇಷನ್ ಕಮಲ ನಡೆಯುತ್ತಿರುವುದನ್ನ ಪರೋಕ್ಷವಾಗಿ ಒಪ್ಪಿಕೊಂಡರು.

ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮೊದಲಿನಿಂದಲೂ ನಾನು, ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರು ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಾಗಿದ್ದೇವೆ. ಯಾರು ಕೂಡ ಪಾರ್ಟಿ ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲ ಸುಮ್ಮನೆ ವದಂತಿ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದು, ಅವರು ಆಸೆ ಪಡುವುದು, ಹತಾಶರಾಗುವುದು ಇದೆಲ್ಲವೂ ಅವರಿಗೆ ಬಿಟ್ಟಿರುವ ವಿಚಾರವಾಗಿದೆ. ಆದರೆ ರಾಜಕಾರಣದಲ್ಲಿ ಎರಡು ರೀತಿಯ ಆಟಗಳು ಇರುತ್ತದೆ. ಆದರೆ ನಾನು ಅದೆಲ್ಲವನ್ನು ಬಿಡಿಸಿ ಹೇಳುವುದಕ್ಕೆ ತಯಾರಿಲ್ಲ ಎಂದು ಹೇಳಿದರು.

dk shivakumar fb 0

ಬಿಜೆಪಿ ಅವರು ಶಾಸಕರನ್ನು ಗುರುಗ್ರಾಮದಲ್ಲಿ ಕೂಡಿಹಾಕಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಪಾರ್ಟಿಯ ಶಾಸಕರನ್ನು ಅವರು ಹೇಗಾದರೂ ಕೂಡಿಹಾಕಿಕೊಳ್ಳಲಿ. ನಾವು ಎಂಎಲ್‍ಎಗಳನ್ನು ಕೂಡಿ ಹಾಕಿಕೊಳ್ಳುವ ಪ್ರಶ್ನೆಯೇ ಇಲ್ಲ. ಸುಮ್ಮನೆ ಮನೆ ಹಾಳು ಮಾಡುವುದು, ಕ್ಷೇತ್ರದ ಜನತೆ ಮತ್ತು ಶಾಸಕರ ಭವಿಷ್ಯವನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು ಎಂದರು.

ಇನ್ನೂ ರಾಜ್ಯ ಉಸ್ತುವಾರಿ ವೇಣುಗೋಪಾಲ ದಿಢೀರನೇ ದೆಹಲಿಗೆ ಹೋಗಿದ್ದ ವಿಚಾರವಾಗಿ ಮಾತನಾಡಿ, ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡಿದ ತಕ್ಷಣ ಅವರು ಇನ್ ಚಾರ್ಜ್ ಕಾರ್ಯಾದರ್ಶಿಯಾಗಿ ಹೋಗಬೇಕಿತ್ತು. ಅವರಿಗೆ ಜವಾಬ್ದಾರಿ ಇದೆ. ಅದೇ ರೀತಿ ನಮಗೂ ಜವಾಬ್ದಾರಿ ಇದೆ. ಕಾಂಗ್ರೆಸ್ ಶಾಸಕರನ್ನು ಎಲ್ಲೆ ಕೂಡಿ ಹಾಕಿದ್ದರೂ, ಅವರನ್ನು ಕರೆದುಕೊಂಡು ಬರುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಇಂದು ಸಂಕ್ರಾಂತಿ ಹಬ್ಬ ಎಲ್ಲರಿಗೂ ಶುಭಾವಾಗಲಿ ಎಂದು ನಾಡಿನ ಜನತೆಗೆ ಡಿಕಿಶಿ ತಿಳಿಸಿದ್ದಾರೆ.

Anand Singh11

ಇಂದು ಸಂಜೆ ಮುಂಬೈಗೆ ತೆರಳುತ್ತಿರುವ ಕುರಿತು ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇತ್ತ ಸಚಿವ ಸ್ಥಾನ ಸಿಗದ ಅತೃಪ್ತ ನಾಯಕರಲ್ಲಿ ಗುರುತಿಸಿಕೊಂಡಿದ್ದ ಶಾಸಕ ಆನಂದ್ ಸಿಂಗ್ ಬೆಳಗ್ಗೆ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕಾಣಿಸಿಕೊಂಡರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ಬಿಜೆಪಿಯವರು ನನ್ನನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ನಿಂದ ಬಿ ಫಾರಂ ಪಡೆದು ಗೆದ್ದು ಬಂದಿದ್ದೇನೆ. ಪಕ್ಷ ಬಿಡುವ ವಿಚಾರ ಕೇವಲ ಊಹಾಪೋಹ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article