ಚಿಕ್ಕಮಗಳೂರು: ಕಳೆದ ಮೂರು ದಶಕಗಳಿಂದ ಚಿಕ್ಕಮಗಳೂರಿನ ದತ್ತಪೀಠದ ಉಮೇದುವಾರಿಕೆಗಾಗಿ ಹೋರಾಡ್ತಿದ್ದ ಹಿಂದೂ ಸಂಘಟನೆಗಳು ಇದೀಗ 1831 ಎಕರೆ ದಾನದ ದಾಖಲೆ ಹಿಡಿದು ದತ್ತಪೀಠ ಹಿಂದೂಗಳದ್ದೇ ಎನ್ನುತಿದ್ದಾರೆ. ಈ ಮಧ್ಯೆ ದತ್ತಪೀಠದ ವಿರುದ್ಧ ಹಾಕಿದ್ದ ಎಲ್ಲಾ ಕೇಸ್‍ಗಳು ವಜಾಗೊಂಡಿದ್ದು ದತ್ತಪೀಠ ಮುಜರಾಯಿ ಸುಪರ್ದಿಗೆ ಬಂದಿದೆ. ಆದರೆ, ಮೂರು ವರ್ಷದ ಹಿಂದೆ ಬಿಜೆಪಿ ಸರ್ಕಾರ ನೇಮಿಸಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಅವಧಿ ಕೂಡ ಮುಗಿದಿದ್ದು, ಹೊಸ ಸಮಿತಿ ರಚಿಸದ ಸರ್ಕಾರ ಎಡಿಸಿಯವರನ್ನ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಆದರೆ, ಸಮಿತಿ ಸದಸ್ಯರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವ್ಯಕ್ಯತೆಯ ಜೊತೆ ಸ್ವಾಭಿಮಾನದ ಸಂಕೇತ ಕೂಡ ಹೌದು. ಹಾಗಾಗಿಯೇ, ಮೂರು ದಶಕಗಳಿಂದ ಎರಡೂ ಧರ್ಮದವರು ದತ್ತಪೀಠದ ಉಮೇದುವಾರಿಕೆಗೆ ಕಾನೂನಿನ ಒಳಗೂ-ಹೊರಗೂ ಹೋರಾಡ್ತಿದ್ದಾರೆ. ಈಗ ಹಿಂದೂ ಸಂಘಟನೆಗಳು ದತ್ತಪೀಠ ಸಂಪೂರ್ಣ ಹಿಂದೂಗಳದ್ದು. ರಾಣಿ ಚೆನ್ನಮ್ಮ-ಮೈಸೂರು ಮಹಾರಾಜರು ಸಾವಿರಾರು ಎಕರೆ ಭೂಮಿಯನ್ನ ದತ್ತಪೀಠಕ್ಕೆ ದಾನವಾಗಿ ನೀಡಿದ್ರು. ಅದಕ್ಕೆ ಇನಾಂ ದತ್ತಾತ್ರೇಯ ಪೀಠ ಎಂದು ಹೆಸರು ಬಂದಿದ್ದು. ಆದ್ರೆ, ಸ್ವತಂತ್ರ ಬಂದ ಬಳಿಕ ಸರ್ಕಾರಗಳು ಬೇರೆಯವರಿಗೆ ಪರಭಾರೆ ಮಾಡಿದ್ರಿಂದ ಅದನ್ನ ಅವರು ಸ್ವಂತಕ್ಕೆ ಬಳಸಿಕೊಳ್ತಿದ್ದಾರೆ. ಸರ್ಕಾರ ದತ್ತಪೀಠದ ಭೂಮಿಯನ್ನ ದೇವಾಲಯಕ್ಕೆ ಬಿಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವಕ್ಫ್ ಬೋರ್ಡ್ ದತ್ತಪೀಠ ತನ್ನ ಸುಪರ್ದಿಗೆ ಬರಬೇಕು ಎಂದು ತೆಗೆದುಕೊಂಡಿತ್ತು. ಆದ್ರೆ, ದತ್ತಪೀಠ ವ್ಯವಸ್ಥಾಪನಾ ಸಮಿತಿ-ಶಾಖಾದ್ರಿ ನೀಡಿದ ಕೇಸಿನ ಆಧಾರದ ಮೇಲೆ ವಜಾ ಮಾಡಿ ಮುಜರಾಯಿ ಇಲಾಖೆ ಸಂಪೂರ್ಣ ದತ್ತಪೀಠದ ಆಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದತ್ತಪೀಠ ಹಿಂದೂಗಳದ್ದು. ದಾಖಲೆಗಳು-ಇತಿಹಾಸ ದತ್ತಪೀಠ ಹಿಂದೂಗಳದ್ದೇ ಎಂದು ಹೇಳುತ್ತಿದೆ. ಸರ್ಕಾರ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿವೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರ 3 ವರ್ಷದ ಅವಧಿಗೆ ದತ್ತಪೀಠದ ಆಡಳಿತ-ಪೂಜೆ-ಪುನಸ್ಕಾರಗಳನ್ನ ನೋಡಿಕೊಳ್ಳಲು ಹಿಂದೂ-ಮುಸ್ಲಿಂ ಎರಡು ಸಮುದಾಯದವರನ್ನ ಸೇರಿ ದತ್ತಪೀಠ ವ್ಯವಸ್ಥಾಪನ ಸಮಿತಿಯನ್ನ ನೇಮಿಸಿತ್ತು. ಇದೀಗ, ಆ ಸಮಿತಿಯ ಅವಧಿಯೂ ಮುಗಿದಿದೆ. ಆದ್ರೆ, ಹೊಸ ಸಮಿತಿ ನೇಮಿಸುವ ಬದಲು ಸರ್ಕಾರ ಅಪರ ಜಿಲ್ಲಾಧಿಕಾರಿಯನ್ನೇ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದು, ಎಡಿಸಿ ನೇತೃತ್ವದಲ್ಲಿ ದತ್ತಜಯಂತಿಯ ಪೂಜಾ-ಕೈಂಕರ್ಯಗಳು ನಡೆಯಲಿವೆ. ಆದ್ರೆ, ಸಮಿತಿ ಸದಸ್ಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಮಿತಿ ಚಾಲ್ತಿಯಲ್ಲಿದ್ದಾಗಲೂ ಸರ್ಕಾರ ನಮಗೆ ಅಲ್ಲಿ ಯಾವುದೇ ಒಳ್ಳೆ ಕೆಲಸ ಮಾಡೋದಕ್ಕೆ ಬಿಡ್ಲಿಲ್ಲ. 2 ವರ್ಷದಿಂದ ಗರ್ಭಗುಡಿಯೊಳಗಿರುವ ಹುಂಡಿಯನ್ನ ತೆಗೆಯಿರಿ ಎಂದು ಮನವಿ ಮಾಡ್ತಿದ್ದೇವೆ. ಸರ್ಕಾರ ಸೈಲೆಂಟಾಗಿದೆ. 2 ತಿಂಗಳಿಗೊಮ್ಮೆ ಹುಂಡಿ ತೆಗೆದಾಗ ನೋಟುಗಳು ಕರಗಿರುತ್ತವೆ. ಅಲ್ಲಿ ತುಂಬಾ ಕೆಲಸ ಮಾಡೋದಿದೆ. ಆದ್ರೆ, ಸರ್ಕಾರ ಏನೂ ಮಾಡ್ತಿಲ್ಲ ಎಂದು ಸಮಿತಿ ಸದಸ್ಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

