Connect with us

Latest

ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ಕೇಸ್, ಸಂಸದ ಅಂತ ಬಿಟ್ಟು ಕಳಿಸಿದ್ರು: ಸಿಎಂ

Published

on

ನವದೆಹಲಿ: ಕಾನೂನು ಉಲ್ಲಂಘನೆ ಮಾಡುವವರನ್ನು ಬಂಧನ ಮಾಡುವುದರಲ್ಲಿ ಯಾವ ತಪ್ಪಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಸಂಸದ ಪ್ರತಾಪ್ ಸಿಂಹ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಮಾತನಾಡಿದ ಸಿಎಂ, ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡುತ್ತಿದೆಯಾ? ಕಾನೂನು ಉಲ್ಲಂಘನೆ ಮಾಡುವವರನ್ನು ಬಂಧನ ಮಾಡುವುದರಲ್ಲಿ ಯಾವ ತಪ್ಪಿಲ್ಲ ಅಂದ್ರು.

ಹನುಮ ಜಯಂತಿಗೆ ನಾವು ಆಕ್ಷೇಪ ಮಾಡಿರಲಿಲ್ಲ, ಅದಕ್ಕಾಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪೊಲೀಸ್ ಮೆರವಣಿಗೆಗೆ ಮಾರ್ಗ ಸೂಚಿ ನೀಡಿದ್ರು. ಅದನ್ನು ಪಾಲಿಸದೇ ಪ್ರತಾಪ್ ಸಿಂಹ ತಮ್ಮ ಹೊಸ ಮಾರ್ಗಕ್ಕಾಗಿ ಪಟ್ಟು ಹಿಡಿದರು. ಪೊಲೀಸ್ ಬಂದೋಬಸ್ತ್ ಇಲ್ಲದೆ ಅವರು ಕೇಳಿದ ಕಡೆಯಲ್ಲ ಅವಕಾಶ ಕೊಡಲು ಹೇಗೆ ಸಾಧ್ಯ? ಕೋಮು ಗಲಭೆಯಾದ್ರೆ ಯಾರು ಹೊಣೆ ಅಂತ ಪ್ರಶ್ನಿಸಿದ್ರು.

ನಿಯಮ ಉಲ್ಲಂಘಿಸಿ ಪೊಲೀಸರು ಹಾಕಿದ ಬ್ಯಾರಿಕೇಡ್ ಮೇಲೆ ಕಾರು ಚಲಾವಣೆ ಮಾಡಿದ್ದಾರೆ. ಕಾನೂನು ಮಾಡುವ ನಾವು ಕಾನೂನು ಗೌರವಿಸದೇ ಉಲ್ಲಂಘನೆ ಮಾಡಿದರೆ ಹೇಗೆ? ಒಬ್ಬ ಸಂಸದನಾಗಿ ಪ್ರತಾಪ್ ಸಿಂಹ ಮಾಡಿದ್ದು ಸರಿಯಾ? ಪ್ರತಾಪ್ ಸಿಂಹ ಮೇಲೆ ಜಾಮೀನು ರಹಿತ ಕೇಸ್‍ಗಳು ದಾಖಲಾಗಿವೆ. ಸಂಸದರಾದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರನ್ನ ಬಿಟ್ಟು ಕಳಿಸಲಾಗಿದೆ ಅಂತ ಹೇಳಿದ್ರು.

ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ತರಾಟೆ ತೆಗೆದುಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. ಹೈಕಮಾಂಡ್ ಮೆಚ್ಚಿಸಲು ಪ್ರತಾಪ್ ಸಿಂಹ ಹೀಗೆ ಮಾಡುತ್ತಿದ್ದಾರೆ ಅಂದ್ರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಬದುಕುತ್ತಿರುವ ನಾವು ಇತಿಮಿತಿಗಳನ್ನು ಮೀರಬಾರದು. ಪ್ರತಿಭಟನೆ ಮಾಡುವುದು ಹಕ್ಕು. ಹಾಗಾಂತ ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮ ತೆಗೆದುಕೊಂಡಿದ್ದಾರೆ. ಪ್ರತಾಪ್ ಸಿಂಹ ಮಾಡಿರುವ ನಡೆಯನ್ನು ನಾನು ಖಂಡಿಸುತ್ತೇನೆ ಅಂದ್ರು.

ಪ್ರತಾಪ್ ಸಿಂಹ ಇನ್ನೂ ಯುವಕ. ಅವರಿಗೆ ಸಂಯಮದ ಅವಶ್ಯಕತೆ ಇದೆ. ಉಗ್ರ ಪ್ರತಿಭಟನೆ ಅಂದರೆ ಕಾನೂನು ಉಲ್ಲಂಘನೆ ಮಾಡುವುದಲ್ಲ. ಶಾಂತಿಯುತ ಪ್ರತಿಭಟನೆ ಮಾಡಬೇಕು ಅಂತ ಪರಮೇಶ್ವರ್ ಕಿವಿಮಾತು ಹೇಳಿದ್ರು.

Click to comment

Leave a Reply

Your email address will not be published. Required fields are marked *