ಕೊಯಂಬತ್ತೂರು: ತಮಿಳುನಾಡಿನ ಥೇಣಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 10 ಮಂದಿ ಬಲಿಯಾಗಿದ್ದು, ಈ ಅವಘಡದಲ್ಲಿ ಪ್ರೇಮ ಕಥೆಯೊಂದು ದುರಂತ ಕಂಡ ಘಟನೆಯೂ ನಡೆದಿದೆ.
ಹೌದು. ಕನ್ಯಾಕುಮಾರಿ ಮೂಲದ ಡಿ ವಿಭಿನ್ ಹಾಗೂ ಕೊಯಮತ್ತೂರು ಮೂಲದ ದಿವ್ಯಾ ಇಬ್ಬರಿಗೂ ಟ್ರೆಕ್ಕಿಂಗ್ ಮಾಡವುದೆಂದರೆ ಅಚ್ಚುಮೆಚ್ಚು. ಅಂತೆಯೇ ಈ ಇಬ್ಬರಿಗೂ ಟ್ರೆಕ್ಕಿಂಗ್ ನಲ್ಲಿ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ವಿಧಿಯಾಟಕ್ಕೆ ಇದೀಗ ದಿವ್ಯಾ ಟ್ರೆಕ್ಕಿಂಗ್ ನಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು, ತಾವು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
Advertisement
Advertisement
ಮಹಿಳಾ ದಿನ ಸಂಭ್ರಮಾಚರಣೆಗಾಗಿ ದಿವ್ಯಾ ಮತ್ತು ಆಕೆಯ ಸ್ನೇಹಿತೆ ಸೇರಿ ಕುರಂಕಣಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಸಂಘಟಿಸಿದ್ದರು. ಈ ಚಾರಣದಲ್ಲಿ ಸುಮಾರು 39 ಮಂದಿ ಭಾಗವಹಿಸಿದ್ದರು. ಭಾನುವಾರ ನಸುಕಿನ ಜಾವ ಏಕಾಏಕಿ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿ ವಿಭಿನ್ ಸೇರಿ 9 ಮಂದಿ ಸಜೀವ ದಹನವಾದ್ರೆ, ವಿಭಿನ್ ಪತ್ನಿ ದಿವ್ಯಾ ಅವರು ಬೆಂಕಿಗಾಹುತಿಯಾಗಿ ಸುಮಾರು ಶೇ.90ರಷ್ಟು ದೇಹ ಸುಟ್ಟಿದೆ. ಹೀಗಾಗಿ ಅವರು ಮಧುರೈನ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
Advertisement
ಕೆಲ ವರ್ಷಗಳ ಹಿಂದೆಯಿಂದ್ಲೇ ದಿವ್ಯಾ ಅವರಿಗೆ ಚೆನ್ನೈನ ಟ್ರೆಕ್ಕಿಂಗ್ ತಂಡದೊಂದಿಗೆ ಸಂಪರ್ಕ ಇತ್ತು. ದಿವ್ಯಾ ಮತ್ತು ಅವರ ತಂಡ ಕೆಲವು ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಸಂಘಟಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ದಿವ್ಯಾ ಖಾಸಗಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಮದುವೆ ಬಳಿಕ ಪೋಷಕರೊಂದಿಗಿನ ವೈಮನಸ್ಸಿನಿಂದಾಗಿ ದಿವ್ಯಾ ಅವರು ತಮ್ಮ ಪತಿ ವಿಭಿನ್ ಜೊತೆ ಕೊಯಂಬತ್ತೂರಿನ ಕಿನಾತುಕಡವು ಎಂಬಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
Advertisement
ಇವರಿಬ್ಬರು ಟ್ರೆಕ್ಕಿಂಗ್ ಗೆ ಹೋಗುತ್ತಿದ್ದಿದ್ದು ಇದೇ ಮೊದಲೇನಲ್ಲ. ಚೆನ್ನೈನ ತನ್ನ ತಂಡದೊಂಡಿಗೆ ಹಲವು ಬಾರಿ ದಂಪತಿ ಟ್ರೆಕ್ಕಿಂಗ್ ಗೆ ಹೋಗಿದ್ದರು. ಅಲ್ಲದೇ ಅವರಿಬ್ಬರಿಗೂ ಅರಣ್ಯ ಪ್ರದೇಶ ಸುತ್ತಾಡುವುದು ಫ್ಯಾಶನ್ ಕೂಡ ಆಗಿತ್ತು ಅಂತ ದಿವ್ಯಾ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಟ್ರೆಕ್ಕಿಂಗ್ ನಿಷೇಧ: ಘಟನೆಯ ಹಿನ್ನೆಲೆಯಲ್ಲಿ ಸದ್ಯ ಅನುಮತಿ ಇಲ್ಲದೇ ಅರಣ್ಯ ಪ್ರದೇಶಕ್ಕೆ ಚಾರಣ ಹೋಗುವುದಕ್ಕೆ ನಿಷೇಧ ಹೇರಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇರುವುದರಿಂದ ಬೇಸಿಗೆ ಮುಗಿಯುವವರೆಗೆ ರಾಜ್ಯದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡಿನ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.