ಮಂಡ್ಯ: ಮಿಲ್ಟ್ರಿ ಹೋಟೆಲ್, ಕಬಾಬ್ ಸೆಂಟರ್ ಬಾಗಿಲು ಮುರಿದು ಹೊಟ್ಟೆ ತುಂಬಾ ತಿಂದು, ಬಳಿಕ ಜನರಲ್ ಸ್ಟೋರ್‍ನಲ್ಲಿ ಸಾವಿರಾರು ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಕಲ್ಲಹಳ್ಳಿಯ ಧರ್ಮಶ್ರೀ ಕಲ್ಯಾಣ ಮಂಟಪದ ಸಮೀಪ ತಡರಾತ್ರಿ ಈ ಘಟನೆ ನಡೆದಿದೆ. ಜೈ ಮಾರುತಿ ಕಬಾಬ್ ಸೆಂಟರ್, ಶ್ರೀ ವೆಂಕಟೇಶ್ವರ ಹಿಂದು ಮಿಲ್ಟ್ರಿ ಹೋಟೆಲ್‍ನಲ್ಲಿ ಊಟ ಮಾಡಿ, ನಂತರ ಶ್ರೀ ರಾಮ ಜನರಲ್ ಸ್ಟೋರ್‍ನಲ್ಲಿದ್ದ ಕ್ಯಾಶ್ ಬಾಕ್ಸ್ ಹೊಡೆದು ಹಣ ಕಳ್ಳತನ ಮಾಡಲಾಗಿದೆ.
ಮೊದಲು ಕಬಾಬ್ ಸೆಂಟರ್ ಬಾಗಿಲು ಮುರಿದು ಕಬಾಬ್ ತಿಂದಿರುವ ಕಳ್ಳರು, ಬಳಿಕ ವೆಂಕಟೇಶ್ವರ ಮಿಲ್ಟ್ರಿ ಹೋಟೆಲ್‍ನಲ್ಲಿ ಮೀನಿನ ಸಾರಿನ ಊಟ ತಿಂದಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣವನ್ನು ನೋಡಿ ಉಂಡು ಹೋದ, ಕೊಂಡು ಹೋದ ಎಂದು ಜನ ಮಾತನಾಡಿಕೊಳ್ತಿದ್ದಾರೆ.