ಹಾಸನ: ನಗರದ (Hassan) ಹೊಸ ಬಸ್ ನಿಲ್ದಾಣದ ಎದುರಿನ ಕೆಹೆಚ್‍ಬಿ ಬಡಾವಣೆಯ ಮನೆಯೊಂದರಲ್ಲಿ ಸುಮಾರು 15 ಲಕ್ಷ ರೂ. ನಗದು (Money) ಹಾಗೂ 7 ಲಕ್ಷ ರೂ. ಬೆಲೆ ಬಾಳುವ 130 ಗ್ರಾಂ. ಚಿನ್ನಾಭರಣವನ್ನು (Gold) ಕೇವಲ 20 ನಿಮಿಷದಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಬಡಾವಣೆಯ ಸಚಿನ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸಚಿನ್ ಅವರ ಪತ್ನಿ ಸರ್ಕಾರಿ ನೌಕರರಾಗಿದ್ದು ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ನಂತರ ಪತಿ ಸಚಿನ್ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ, ಸಂಜೆ ಮನೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯ ಮುಂದಿನ ಬಾಗಿಲು ತೆರೆದಿತ್ತು. ಆತಂಕದಿಂದ ಒಳಗೆ ಹೋಗಿ ನೋಡಿದಾಗ ಎರಡೂ ರೂಮ್‍ಗಳಲ್ಲಿದ್ದ ವಾಲ್ಡ್‍ರೂಬ್‍ಗಳೂ ತೆರೆದು ಕೊಂಡಿದ್ದವು. ಒಂದು ರೂಮಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಲು ಹಣ ಹೊಂದಿಸಿ 15 ಲಕ್ಷ ರೂ. ಇಡಲಾಗಿತ್ತು. ಮತ್ತೊಂದು ರೂಮಿನಲ್ಲಿ 38 ಗ್ರಾಂ ಚಿನ್ನದ ಸರ, 32 ಗ್ರಾಂ ತೂಕದ ಚಿನ್ನದ ಬಳೆ, 15 ಗ್ರಾಂ ತೂಕದ ಚಿನ್ನದ ಓಲೆ, 5 ಗ್ರಾಂ ಡೈಮಂಡ್ ಓಲೆ, 15 ಗ್ರಾಂ ತೂಕದ ಚಿನ್ನದ ಬಳೆ ಸೇರಿದಂತೆ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಕಳ್ಳ ಪರಾರಿಯಾಗಿದ್ದಾನೆ.
ಹೆಲ್ಮೆಟ್ ಧರಸಿ ಬಂದಿರುವ ಕಳ್ಳ ಮನೆಯ ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ಇಲ್ಲದ ಜಾಗವನ್ನು ನೋಡಿ ಆ ಕಡೆಯಿಂದ ಕಳ್ಳ ಒಳಗೆ ಬಂದಿದ್ದಾನೆ. ಕಳ್ಳತನ ಮಾಡಿಕೊಂಡು ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಕೆಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.