ಮಡಿಕೇರಿ: ಮಧ್ಯರಾತ್ರಿ ವೇಳೆಯಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು ಮತ್ತು ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
Advertisement
ಕೊಳಕೇರಿ ಗ್ರಾಮದಲ್ಲಿ ಬೊಮ್ಮಂಜಿಗೇರಿಯಲ್ಲಿ ಮಧ್ಯರಾತ್ರಿ ದರೋಡೆ ನಡೆದಿದ್ದು, ಗ್ರಾಮದ ಜನರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಸೋದರಿಯರಿಬ್ಬರನ್ನು ಕಟ್ಟಿಹಾಕಿ ಕೊಲೆ ಬೆದರಿಕೆ ಒಡ್ಡಿದ್ದಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಉದ್ಯೋಗಿ ಅನುಮಾನಾಸ್ಪದ ಸಾವು – ಪ್ರಿಯಕರ ಬಂಧನ
Advertisement
ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು, ದರೋಡೆಕೋರರ ಹೆಡೆಮುರಿ ಕಟ್ಟಲು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ನಿವೃತ್ತ ನ್ಯಾಯಾಧೀಶರಾದ ವಾಂಜಂಡ ಬೋಪಯ್ಯ ಅವರ ಸೋದರಿಯರಾದ ವಾಂಜಂಡ ಜಾನಕಿ (78) ಮತ್ತು ಅಮ್ಮಕ್ಕಿ (68) ತಮ್ಮ ಮನೆಯ ಮಹಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಸುಮಾರಿಗೆ ಮನೆಯ ಬಾಗಿಲು ಮುರಿದು ಒಳನುಗ್ಗಿದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಸೋದರಿಯರನ್ನು ಬೆದರಿಸಿದ್ದಾರೆ.
Advertisement
Advertisement
ಬಳಿಕ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಕೈಕಾಲುಗಳನ್ನು ಕಟ್ಟಿದ್ದಾರೆ. ಈ ವೇಳೆ ಹೆದರಿದ ಸೋದರಿಯರು ತಮ್ಮ ಜೀವಕ್ಕೆ ಅಪಾಯ ಮಾಡಬೇಡಿ. ಏನು ಬೇಕಾದರೂ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಬಳಿಕ ಮನೆಯನ್ನು ತಡಕಾಡಿದ ಕಳ್ಳರು, ಎರಡೂವರೆ ಲಕ್ಷ ರೂಪಾಯಿ ನಗದು ಮತ್ತು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಹೇಗೋ ಕಟ್ಟುಗಳನ್ನು ಸಡಿಲಿಸಿಕೊಂಡ ಸೋದರಿಯರಿಬ್ಬರು, ದೂರವಾಣಿ ಮೂಲಕ ನೀಡಿದ ಮಾಹಿತಿಯಂತೆ, ಸೋದರ ಬೋಪಯ್ಯ ಅವರು ನಾಪೋಕ್ಲು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು
ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಜಾನಕಿ ಮತ್ತು ಅಮ್ಮಕ್ಕಿ ಕಟ್ಟಿಹಾಕಿದ ಸ್ಥಿತಿಯಲ್ಲೇ ಇದ್ದರು. ಮೈಮೇಲೆ ಗಾಯಗಳಾಗಿದ್ದವು. ಬಳಿಕ ಪೊಲೀಸರು ಅವರನ್ನು ಬಿಡಿಸಿ ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ಸೋದರಿಯರಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ದುಷ್ಕರ್ಮಿಗಳು ಮನೆ ಬಳಿಯ ಕಣದಲ್ಲಿ ಮೋಜು ಮಾಡಿದ್ದ ಕುರುಹಾಗಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅಲ್ಲದೆ, ಆರೋಪಿತರು ಮನೆಯೊಳಗೆ ಇದ್ದ ಮದ್ಯವನ್ನೂ ಕುಡಿದು, ಕೆಲ ಸಮಯ ಟಿವಿ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ, ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ವೆಂಕಟೇಶ್, ನಾಪೋಕ್ಲು ಠಾಣೆಯ ಪ್ರಭಾರ ಎಸ್.ಐ.ಕುಶಾಲಪ್ಪ, ಹೆಡ್ ಕಾನ್ಸ್ ಟೇಬಲ್ ರವಿಕುಮಾರ್ ಮತ್ತಿತರ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.